ಬುಧವಾರ, ಆಗಸ್ಟ್ 17, 2022
25 °C
ಜಿಲ್ಲೆಯಾದ್ಯಂತ ಪಕ್ಷಗಳು, ರೈತ, ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಭಾರತ ಬಂದ್‌ಗೆ ರಾಯಚೂರಿನಲ್ಲಿ ಭಾಗಶಃ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯು ಮಂಗಳವಾರ ಕರೆ ನೀಡಿದ್ದ ‘ಭಾರತ ಬಂದ್‌’ಗೆ ರಾಯಚೂರು ಜಿಲ್ಲೆಯಲ್ಲಿ ಭಾಗಶಃ ಸ್ಪಂದನೆ ವ್ಯಕ್ತವಾಯಿತು.

ರಾಯಚೂರು ಮತ್ತು ಸಿಂಧನೂರು ನಗರಗಳಲ್ಲಿ ಮಧ್ಯಾಹ್ನದವರೆಗೂ ಅಂಗಡಿಮುಗ್ಗಟ್ಟುಗಳನ್ನು ವ್ಯಾಪಾರಿಗಳು ಬಂದ್‌ ಮಾಡಿಕೊಂಡಿದ್ದರು. ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಸರ್ಕಾರಿ ಬಸ್‌ಗಳ ಸಂಚಾರವು ಮಧ್ಯಾಹ್ನದವರೆಗೂ ಎಂದಿನಂತೆ ಇರಲಿಲ್ಲ. ಸಿಂಧನೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಾನ್ವಿ, ಲಿಂಗಸುಗೂರು, ದೇವದುರ್ಗ, ಮಸ್ಕಿ ಹಾಗೂ ಸಿರವಾರ ತಾಲ್ಲೂಕುಗಳಲ್ಲಿ ಬಂದ್‌ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಬಂದ್ ಬೆಂಬಲಿಸಿ ವಿವಿಧ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರಾಯಚೂರಿನಲ್ಲಿ ರಸ್ತೆತಡೆ: ರಾಯಚೂರು ನಗರದ ಕೇಂದ್ರ ಬಸ್‌ ನಿಲ್ದಾಣ ಮುಂಭಾಗ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಭಾರತ ಬೆಂಬಲಿಸಿ ರಸ್ತೆಯಲ್ಲೇ ಮಧ್ಯಾಹ್ನದವರೆಗೂ ಪ್ರತಿಭಟನಾ ಧರಣಿ ನಡೆಸಲಾಯಿತು.

ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಹೊರಜಿಲ್ಲೆಗಳಿಂದ ಬಂದಿದ್ದ ಬಸ್‌ಗಳನ್ನು ಪರ್ಯಾಯ ಮಾರ್ಗದಿಂದ ಕಳುಹಿಸಲಾಯಿತು. ಬಸ್‌ ನಿಲ್ದಾಣದತ್ತ ಬರುವ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿತ್ತು. ಹೀಗಾಗಿ ಮಧ್ಯಾಹ್ನದವರೆಗೂ ಎಂದಿನಂತೆ ಸರ್ಕಾರಿ ಬಸ್‌ಗಳ ಸಂಚಾರ ಸೇವೆ ಇರಲಿಲ್ಲ.

ಕಾರ್ಮಿಕ ಸಂಘಟನೆಗಳು ವಿವಿಧ ಕಡೆಗಳಿಂದ ಮೆರವಣಿಗೆ ಮೂಲಕ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತವನ್ನು ತಲುಪಿದವು. ಜಿಲ್ಲಾ ಕಾಂಗ್ರೆಸ್‌, ಜಿಲ್ಲಾ ಜೆಡಿಎಸ್‌ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಕೇಂದ್ರದ ವಿರುದ್ಧ ರೈತ ಸಮುದಾಯ ಪ್ರತಿಭಟನೆ ಆರಂಭಿಸಿದ್ದರೂ ಸ್ಪಂದಿಸುತ್ತಿಲ್ಲ. ಸರ್ಕಾರ ಹೊಸ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಪ್ರತಿಭಟನೆ ನಡೆಸಲಾಗುವುದು. ದೆಹಲಿಯಲ್ಲಿ ನಡೆದ ರೈತರ ಹೋರಾಟವನ್ನು ಬೆಂಬಲಿಸಿ, ಜಿಲ್ಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಕಾಂಗ್ರೆಸ್‌ ಮುಖಂಡರಾದ ಎನ್‌.ಎಸ್‌.ಬೋಸರಾಜ, ರವಿ ಬೋಸರಾಜ ನಗರಸಭೆ ಸದಸ್ಯ ಜಯಣ್ಣ, ಕೆ.ಶಾಂತಪ್ಪ ಮಾತನಾಡಿದರು. ಮುಖಂಡರಾದ ಜಿಂದಪ್ಪ, ಜಿ.ಬಸವರಾಜ ರೆಡ್ಡಿ, ಜಿ.ಶಿವಮೂರ್ತಿ, ದರೂರು ಬಸವರಾಜ, ಜಯವಂತರಾವ್‌ ಪತಂಗೆ, ಜಿ.ಸುರೇಶ, ನರಸಿಂಹಲು ಮಾಡಗಿರಿ, ಬೂದೆಪ್ಪ, ಅಮರೇಗೌಡ ಹಂಚಿನಾಳ, ಸಾಜೀದ್‌ ಸಮೀರ್, ಅಸ್ಪಂಪಾಷಾ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ವಿರೂಪಾಕ್ಷಿ, ಮುಖಂಡರಾದ ಯೂಸುಫ್‌ಖಾನ್‌, ಎನ್‌.ಶಿವಶಂಕರ, ಬಿ.ತಿಮ್ಮಾರೆಡ್ಡಿ, ವಿಶ್ವನಾಥ ಪಟ್ಟಿ, ಹೋರಾಟಗಾರರಾದ ರಜಾಕ್‌ ಉಸ್ತಾದ್‌, ಚನ್ನಬಸವ ಜಾನೇಕಲ್‌, ಶರಣಬಸವ, ಅಶೋಕ ಜೈನ್‌, ಡಿ.ವೀರೇಶ, ಕೆ.ಜಿ.ವೀರೇಶ, ಬಸವರಾಜ ಗಾರಲದಿನ್ನಿ, ಸೂಗೂರಯ್ಯ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.