ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಣಾ–ಭೀಮಾ ನದಿಗಳ ಸಂಗಮದಲ್ಲಿ ಪ್ರವಾಹ ದುಪ್ಪಟ್ಟು

ರಾಯಚೂರು ತಾಲ್ಲೂಕಿನ ನದಿತೀರದಲ್ಲಿರುವ 14 ಗ್ರಾಮಗಳಲ್ಲಿ ಪ್ರವಾಹ ಮಟ್ಟ ಏರಿಕೆ
Last Updated 8 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಇವರೆಗೂ ಸಾಮಾನ್ಯವಾಗಿ ಹರಿಯುತ್ತಿದ್ದ ಭೀಮಾನದಿ ಕೂಡಾ ಮೈದುಂಬಿಕೊಂಡಿದ್ದು, ರಾಯಚೂರು ತಾಲ್ಲೂಕಿನ ಕಾಡ್ಲೂರು ಸಮೀಪ ಕೃಷ್ಣಾನದಿಗೆ ಸಂಗಮಗೊಂಡು ಪ್ರವಾಹವನ್ನು ದುಪ್ಪಟ್ಟುಗೊಳಿಸಿದೆ.

ನಾರಾಯಣಪುರ ಜಲಾಶಯದಿಂದ ಹೊರಬಿಡುತ್ತಿದ್ದ ನೀರಿನ ಪ್ರಮಾಣವು 4.6 ಲಕ್ಷ ಕ್ಯುಸೆಕ್‌ನಿಂದ 4.14 ಲಕ್ಷ ಕ್ಯುಸೆಕ್‌ಗೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳ ನದಿತೀರಗಳಲ್ಲಿ ಪ್ರವಾಹ ಸ್ವಲ್ಪ ಇಳಿಮುಖವಾಗಬಹುದು. ಆದರೆ, ರಾಯಚೂರು ತಾಲ್ಲೂಕಿನ ನದಿತೀರಗಳಲ್ಲಿ ಪ್ರವಾಹ ಸದ್ಯಕ್ಕೆ ತಗ್ಗುವ ಪರಿಸ್ಥಿತಿಯಿಲ್ಲ.

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನಲ್ಲಿ ಭೀಮಾನದಿಗೆ ನಿರ್ಮಿಸಿರುವ ಸೊನ್ನ ಬ್ಯಾರೇಜ್‌ನಿಂದ 2 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಇನ್ನೂ ಬೀಳುತ್ತಿರುವುದರಿಂದ ಭೀಮಾ ನದಿಯಲ್ಲೂ ಪ್ರವಾಹ ಕೆಲವು ದಿನಗಳ ಮಟ್ಟಿಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಡುಗಡ್ಡೆ ಸಂಪರ್ಕ ಕಡಿತ:ನದಿ ಪ್ರವಾಹ ಹೆಚ್ಚಳ ಆಗಿರುವುದರಿಂದ ರಾಯಚೂರು ತಾಲ್ಲೂಕಿನ ಕುರ್ವಕಲಾ, ಕುರ್ವಕುರ್ದಾ ಹಾಗೂ ಅಗ್ರಹಾರ ನಡುಗಡ್ಡೆಯಲ್ಲಿರುವ ಜನರು ಸದ್ಯಕ್ಕೆ ಹೊರಬರುವುದು ದುಸ್ತರವಾಗಿದೆ. ಅಲ್ಲಿರುವ ಜನರಿಗೆ ಅಗತ್ಯ ಆಹಾರಧಾನ್ಯ ಪೂರೈಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಪ್ರವಾಹ ಹೆಚ್ಚಳವಾದರೆ ಯಾವುದೇ ಸರಕುಗಳನ್ನು ನಡುಗಡ್ಡೆಗೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೆ, ಅಲ್ಲಿರುವ ಜನರನ್ನೆಲ್ಲ ಈಚೆಗೆ ಕರೆತರುವುದು ಹರಸಾಹಸವಾಗುತ್ತದೆ.

ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡೆ ನಡುಗಡ್ಡೆಯಲ್ಲಿ ಎಂಟು ಜನರು ಉಳಿದುಕೊಂಡಿದ್ದು, ಅವರನ್ನು ಈಚೆಗೆ ಕರೆತರುವುದಕ್ಕೆ ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌)ವು ಪ್ರವಾಹದಲ್ಲಿ ಬೋಟ್‌ ತೆಗೆದುಕೊಂಡು ಹೋದರೂ ನಡುಗಡ್ಡೆ ತಲುಪುವುದಕ್ಕೆ ಸಾಧ್ಯವಾಗದೆ ವಾಪಸಾಗಿದೆ. ನಡುಗಡ್ಡೆ ಜನರೊಂದಿಗೆ ಅಧಿಕಾರಿಗಳು ಮೊಬೈಲ್‌ ಮೂಲಕ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಮ್ಯಾದರಗೋಳ, ಗುರ್ಜಾಪುರ ಮತ್ತು ಅಂಜಳ ಗ್ರಾಮಗಳಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಕೆಲವು ಖಾಸಗಿ ಸಂಘ–ಸಂಸ್ಥೆಗಳು ಕೂಡಾ ನಡುಗಡ್ಡೆ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಹೊದಿಕೆ, ಆಹಾರಸಾಮಗ್ರಿಗಳನ್ನು ತಲುಪಿಸುತ್ತಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ತವದಗಡ್ಡೆ, ಓಂಕಮ್ಮನಗಡ್ಡೆ, ಮ್ಯಾದರಗಡ್ಡಿ, ದೇವದುರ್ಗ ತಾಲ್ಲೂಕಿನ ಗೂಗಲ್‌, ಲಿಂಗದಳ್ಳಿ, ಅಂಜಳ, ಮಡಗೋಟ, ವೀರಗೋಟ, ಕೊಪ್ಪರ, ಹೆರೆಯನಕುಂಪಿ, ಕರ್ಕಿಹಳ್ಳಿ ಗ್ರಾಮಗಳಿಂದ ಇವರೆಗೂ 383 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ರಕ್ಷಣಾ ತಂಡ:ನದಿತೀರಗಳಲ್ಲಿ ಯಾವುದೇ ಅಪಾಯ ಸಂಭವಿಸದಂತೆ ಜಿಲ್ಲಾಡಳಿತವು ಕ್ರಮ ಕೈಗೊಂಡಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು, ಸೇನಾಪಡೆ ಹಾಗೂ ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಿದೆ. ಇವರೆಗೂ ಯಾವುದೇ ಅಪಾಯ ಉಂಟಾಗಿಲ್ಲ. ಮುನ್ಸೂಚನೆ ಕ್ರಮವಾಗಿ ಕಟ್ಟೆಚ್ಚರ ವಹಿಸುವಂತೆ ರಕ್ಷಣಾ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT