ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥ ಭ್ರಷ್ಟ ಸರ್ಕಾರ ಜೀವನದಲ್ಲಿ ಕಂಡಿಲ್ಲ: ಡಿ.ಕೆ.ಶಿವಕುಮಾರ್

Last Updated 23 ಮಾರ್ಚ್ 2022, 15:43 IST
ಅಕ್ಷರ ಗಾತ್ರ

ರಾಯಚೂರು: ’ಬೆಲೆ ಏರಿಕೆ ಸಂಕಷ್ಟ, ಜಾತಿ-ಧರ್ಮದ ಕಲಹ, ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯಂತಹ ಭ್ರಷ್ಟ ಸರ್ಕಾರವನ್ನು ನಾನು ಜೀವಮಾನದಲ್ಲಿ ಕಂಡಿಲ್ಲ‘ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕಿನ ಮೇಲೆ ಹೊರೆ ಹಾಕಿದಂತಾಗಿದೆ. ಪದೆಪದೇ ಇಂಧನ ದರ ಹೆಚ್ಚಿಸಿ ಜನರ ಜೇಬಿನಿಂದ ಹಣ ಪಿಕ್ ಪಾಕೇಟ್ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರವು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪರಿಶಿಷ್ಟರು ಹಾಗೂ ಹಿಂದುಳಿದವರ ಸೌಲಭ್ಯಗಳಲ್ಲಿಯೂ ಕಮಿಷನ್ ಪಡೆಯಲಾಗುತ್ತಿದೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೋರಾಟಕ್ಕಿಳಿಯಲಿದೆ ಎಂದು ತಿಳಿಸಿದರು.

ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಸೇರಿ ಇತರೆ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯದ ವರ್ತಕರಿಗೆ ಅವಕಾಶ ನೀಡದೇ ಇರುವುದು ಸರಿಯಲ್ಲ. ಇದು ಬಹುದೊಡ್ಡ ಮಾರಕವಾಗಿದೆ. ಬಿಜೆಪಿಯ ಈ ದೋರಣೆಯಿಂದ ಇಡೀ ದೇಶಕ್ಕೆ ದೊಡ್ಡ ಕಪ್ಪು ಚುಕ್ಕೆ ಬಳಿದಂತಾಗಿದೆ. ಎಲ್ಲ ಧರ್ಮದವರು ಇದ್ದಾಗ ಅದು ಒಂದು ರಾಜ್ಯ, ದೇಶವಾಗುತ್ತದೆ. ನಾವೆಲ್ಲ ಹಿಂದೂಗಳು, ನಮ್ಮ ಧರ್ಮ ಬಿಟ್ಟು ಬದುಕಲು ಸಾಧ್ಯವೇ? ಹಾಗೆಯೇ ಎಲ್ಲ ಧರ್ಮದವರನ್ನು ಗೌರವ, ಸೋದರತ್ವ ಭಾವನೆಯಿಂದ ಕಾಣುವುದನ್ನು ಕಲಿಯಬೇಕು. ಎಲ್ಲರಿಗೂ ಬದುಕಲು ಅವಕಾಶ ಮಾಡಿಕೊಡಬೇಕು. ಭಾರತ ದೇಶದಲ್ಲಿ ಎಷ್ಟೋ ಧರ್ಮ, ಜಾತಿ ಪಂಥಯಿದೆ ಎಂದು ಹೇಳಿದರು.

ಡಿಜಿಟಲ್‌ ಸದಸ್ಯತ್ವ: ದೇಶದಲ್ಲಿ ಮೊದಲ ಬಾರಿಗೆ ರಾಜಕೀಯ ಪಕ್ಷದಿಂದ ಡಿಜಿಟಲ್ ಸದಸ್ಯತ್ವ ಅಭಿಯಾನ ಆರಂಭಿಸಿರುವ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಇಲ್ಲಿ ತನಕ 28 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ನೀಡಲಾಗಿದೆ. ಮುಂದಿನ 8 ದಿನಗಳಲ್ಲಿ ನಿಗದಿತ ಗುರಿಯನ್ನು ತಲುಪಲಾಗುವುದು. ಡಿಜಿಟಲ್ ಸದಸ್ಯತ್ವದ ಮುಖಾಂತರ ಪಕ್ಷಕ್ಕೆ ಬರಲು ಸಾರ್ವಜನಿಕರು ಅತ್ಯಂತ ಉತ್ಸಾಹವನ್ನು ತೋರುತ್ತಿದ್ದಾರೆ ಎಂದು ತಿಳಿಸಿದರು.

ರಾಯಚೂರಿನಲ್ಲಿ ಇದುವರೆಗೂ 1.2 ಲಕ್ಷ ಸದಸ್ಯರು ಡಿಜಿಟಲ್ ಮುಖಾಂತರ ನೋಂದಣಿ ಮಾಡಿಕೊಂಡಿದ್ದು, ಮುಂದಿನದ ದಿನಗಳಲ್ಲಿ 2 ಲಕ್ಷ ಸದಸ್ಯತ್ವವನ್ನು ಮಾಡಲು ಸೂಚಿಸಲಾಗಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ, ಶಾಸಕರಾದ ಬಸವನಗೌಡ ದದ್ದಲ್, ಡಿ.ಎಸ್.ಹುಲಗೇರಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT