ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು!

ಎಸ್‌ಟಿ ಮೀಸಲಾದ ಮೇಲೆ ಗೆಲುವಿನ ಸಾಧಿಸುವ ಪಕ್ಷ ಅದಲು ಬದಲು
Last Updated 20 ಮಾರ್ಚ್ 2019, 13:23 IST
ಅಕ್ಷರ ಗಾತ್ರ

ರಾಯಚೂರು: ಆರಂಭದಿಂದಲೂ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ ಬಿಜೆಪಿ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ!

2008 ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಆಗಿದ್ದರಿಂದ ಸಾಮಾನ್ಯ ಕ್ಷೇತ್ರವಾಗಿದ್ದ ರಾಯಚೂರು, ಪರಿಶಿಷ್ಟ ಪಂಗಡ ಸಮುದಾಯದ ಅಭ್ಯರ್ಥಿಗಳಿಗೆ ಮೀಸಲಾಯಿತು. ಮೀಸಲಾದ ಕ್ಷೇತ್ರಕ್ಕೆ 2009 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ವಿಸ್ತರಿಸಿಕೊಂಡು ಬಂದಿರುವುದನ್ನು ಕಾಣಬಹುದು. ಇದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಎದುರು ಪ್ರತಿಸ್ಪರ್ಧಿ ಸ್ಥಾನದಲ್ಲೂ ಬಿಜೆಪಿ ಇರಲಿಲ್ಲ ಎಂಬುದು ಗಮನಾರ್ಹ.

2009 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜಾ ವೆಂಕಟಪ್ಪ ನಾಯಕ ಅವರನ್ನು ಬಿಜೆಪಿ ಅಭ್ಯರ್ಥಿ ಸಣ್ಣ ಫಕಿರಪ್ಪ ಅವರು 31,606 ಮತಗಳ ಅಂತರದಿಂದ ಸೋಲಿಸಿದರು. ‌ಈ ಮೊದಲಿನ ಚುನಾವಣೆಗಳಲ್ಲಿ ಎರಡು ಲಕ್ಷ ಮತಗಳನ್ನು ಸೆಳೆಯುವುದಕ್ಕೂ ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಮೊದಲ ಸಲ ಅತಿಹೆಚ್ಚು 3,16,450 ಮತಗಳನ್ನು ಬಿಜೆಪಿ ಪಡೆಯಿತು. ಲೋಕಸಭೆ ಕ್ಷೇತ್ರದಲ್ಲಿದ್ದ 14,86,326 ಮತದಾರರ ಪೈಕಿ ಅತಿ ಕಡಿಮೆ 6,92,264 (ಶೇ 45.9) ರಷ್ಟು ಮಾತ್ರ ಮತದಾರರು ಮತ ಚಲಾಯಿಸಿದ್ದರು. ಅದರಲ್ಲಿ ಶೇ 46.38 ರಷ್ಟು ಬಿಜೆಪಿ ಅಭ್ಯರ್ಥಿ ಮತಗಳನ್ನು ಪಡೆದುಕೊಂಡಿದ್ದರು.

2014 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿನ ಪ್ರಾಬಲ್ಯವನ್ನು ಮರಳಿ ಸ್ಥಾಪಿಸಿತು. ಹಿಂದಿನ ಚುನಾವಣೆಯಲ್ಲಿಗೆಲುವು ಸಾಧಿಸಿದ್ದ ಬಿಜೆಪಿ ಅದಲು ಬದಲಾಯಿತು. ಸಂಸದ ಬಿ.ವಿ. ನಾಯಕ ಅವರು 1,499 ಮತಗಳ ಅಂತರದಿಂದ ಜಯ ಸಾಧಿಸಿದರು. ಶಿವನಗೌಡ ನಾಯಕ ಅವರನ್ನು ಅಭ್ಯರ್ಥಿ ಮಾಡಿದ್ದ ಬಿಜೆಪಿ, ಪ್ರತಿಸ್ಪರ್ಧಿ ಸ್ಥಾನ ಕಾಯ್ದುಕೊಂಡಿತು. ಕಡಿಮೆ ಅಂತರದಲ್ಲಿ ಗೆಲುವು ತಪ್ಪಿಹೋಯಿತು. ಗಮನಾರ್ಹವೆಂದರೆ, 2009 ರ ಚುನಾವಣೆಗಿಂತಲೂ ಬಿಜೆಪಿಗೆ ಹೆಚ್ಚು ಮತಗಳು ಬಂದಿದ್ದು.

16,61,606 ಮತಗಳಲ್ಲಿ 58.32 ರಷ್ಟು ಮತದಾನವಾಗಿತ್ತು. ಅದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ 4,43,659 (ಶೇ 45.79) ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ 4,42,160 (ಶೇ 45.64) ಮತಗಳನ್ನು ಪಡೆದಿದ್ದರು. ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ, 1.25 ಲಕ್ಷದಷ್ಟು ಹೆಚ್ಚು ಮತದಾರರನ್ನು ಬಿಜೆಪಿ ಸೆಳೆದುಕೊಂಡು ಪ್ರಭಾವವನ್ನು ಉಳಿಸಿಕೊಂಡಿತು.

ಈಗ ನಡೆಯುತ್ತಿರುವ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಸಂಸದ ಬಿ.ವಿ. ನಾಯಕ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರತಿಸ್ಪರ್ಧಿ ಆಗುವುದು ನಿಶ್ಚಿತ. ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಬೇರುಮಟ್ಟದಿಂದ ಪ್ರಭಾವ ಹೊಂದಿರುವ ಕಾಂಗ್ರೆಸ್‌ ಹಾಗೂ ಕಳೆದ ಎರಡು ಚುನಾವಣೆಗಳಿಂದ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದೆ. ಗೆಲುವು ಯಾವ ಪಕ್ಷಕ್ಕೆ ಸಿಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಕಾಯಂ ಕಾಂಗ್ರೆಸ್‌ ಗೆಲುವು

1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ 2004 ರವರೆಗೂ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಕಾಯಂ ಗೆಲುವು ಸಾಧಿಸಿದೆ. 2014 ರ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತೆ ಗೆಲುವು ಸಾಧಿಸಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಈ ಚುನಾವಣೆಯಲ್ಲಿ ಗೆಲುವು ಯಾವ ಪಕ್ಷಕ್ಕಿದೆ ಎಂಬುದನ್ನು ಕಾದು ನೋಡಬೇಕು. 1996 ರಲ್ಲಿ ಜನತಾದಳ ಹಾಗೂ 2009 ರಲ್ಲಿ ಬಿಜೆಪಿ ಒಂದು ಬಾರಿ ಮಾತ್ರ ಗೆಲುವು ಸಾಧಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT