ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹಗಾರರಿಗೆ ಸ್ವಾತಂತ್ರ್ಯ ಕೊಡಿ: ಪ್ರಸನ್ನ

Last Updated 23 ಫೆಬ್ರುವರಿ 2020, 10:35 IST
ಅಕ್ಷರ ಗಾತ್ರ

ರಾಯಚೂರು: ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ಬಗ್ಗೆ ಬರೆಯುವ ಕವಿಗಳನ್ನು, ಬರಹಗಾರರನ್ನು ಟೀಕಿಸುತ್ತಿರುವುದು ಸರಿಯಲ್ಲ. ಬರಹಗಾರರ ಸ್ವಾತಂತ್ರ್ಯಕ್ಕೆ ಬೆಲೆ ಕೊಡಬೇಕು ಎಂದು ಸಾಹಿತಿ ಮಂಡಲಗಿರಿ ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಶನಿವಾರ ಲೋಹಿಯಾ ಪ್ರತಿಷ್ಠಾನದಿಂದ ಶನಿವಾರ ಏರ್ಪಡಿಸಿದ್ದ ಯುವ ಕವಿ ಶಿವಶಂಕರ್ ಕಡದಿನ್ನಿ ಅವರ ‘ನಸುಕು’ ಹೈಕು ಸಂಕಲನ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಬರಹಗಾರರಿಗೆ ಮುಕ್ತವಾದ ಅವಕಾಶ ಇರಬೇಕು. ಆದರೆ ಹಿಂದಿನಿಂದಲೂ ಕವಿ, ಬರಹಗಾರರ ಸ್ವಾತಂತ್ರ್ಯ ಪ್ರಶ್ನಿಸುವ ವಿರೋಧಿಸುವ ಕೆಲಸವಾಗುತ್ತಿದ್ದು ಖಂಡನಾರ್ಹ ಎಂದರು.

ಯುವಕರು ಯಾವುದೋ ವಿಚಾರಕ್ಕೆ ಒಳಗಾಗಿ ಸತ್ಯಾಸತ್ಯತೆ ಅರಿಯದೇ ದಾರಿ ತಪ್ಪುವುದು ಇಂದಿನ ದಿನಗಳಲ್ಲಿ ನಡೆಯುತ್ತಿದೆ. ಇಂಥವರ ನಡುವೆ ಸಾಮಾಜಿಕ ಬದ್ಧತೆಯಿಂದ ಜಪಾನ್ ಸಾಹಿತ್ಯ ಪ್ರಕಾರವಾದ ಹೈಕು ಸಂಕಲನವನ್ನು ಹೊರ ತಂದ ಯುವ ಕವಿ ಶಿವಶಂಕರ ಅವರ ಕಾರ್ಯ ಅಭಿನಂದನಾರ್ಹ. ಬರಹಗಾರರು ಸಮಾಜದೊಂದಿಗೆ ಸೈದ್ಧಾಂತಿಕ ವಿಚಾರವಾಗಿ ಜಗಳವಾಡದೇ ತನ್ನೊಳಗಿನ ಶೋಷಣೆ, ಬಂಡಾಯ ನ್ಯೂನ್ಯತೆ ಜೊತೆ ಜಗಳವಾಡಬೇಕು. ಅಂದಾಗ ಮಾತ್ರ ನಿಜವಾದ ಬರಹಗಾರನಾಗಲು ಸಾಧ್ಯ ಎಂದು ಹೇಳಿದರು.

ಹಿರಿಯ ಸಾಹಿತಿ ವೀರಹನುಮಾನ ಮಾತನಾಡಿ, ರಾಯಚೂರು ಕನ್ನಡದ ಗಜಲ್ ಸಾಹಿತ್ಯದ ರಾಜಧಾನಿಯಾಗಿದ್ದು ಈಗ ಹಲವಾರು ಸಾಹಿತಿಗಳು ಹೈಕು ಸಂಕಲನ ರಚನೆ ಮಾಡುವ ಮೂಲಕ ಹೈಕು ರಾಜಧಾನಿಯಾಗಿ ಮಾರ್ಪಾಡು ಮಾಡಲು ಹೊರಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಯುವ ಕವಿಗಳು ಹೆಚ್ಚಾಗಿ ಪ್ರೇಮ, ಪ್ರಾಕೃತಿಕ ಸೌಂದರ್ಯದ ಕುರಿತು ಬರೆಯುವುದು ಸಾಮಾನ್ಯ. ಆದರೆ, ಹೈಕುದಂತಹ ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡಿ ಸಾಮಾಜಿಕ ಜವಾಬ್ದಾರಿ, ಅನಿಷ್ಟ, ಮೂಢನಂಬಿಕೆಗಳ ವಿರುದ್ಧ ಬರೆದ ಶಿವಶಂಕರ್ ಅವರ ಕಾರ್ಯ ಅಭಿನಂದನೀಯ. ಇನ್ನೂ ಹೆಚ್ಚಿನ ಪುಸ್ತಕಗಳನ್ನು ಹೊರತಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.

ಕೃತಿ ಬರಹಗಾರ ಶಿವಶಂಕರ ಕಡದಿನ್ನಿ ಮಾತನಾಡಿದರು.

ವೇದಿಕೆಯಲ್ಲಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷೆ ಗಿರಿಜಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಭೀಮನಗೌಡ ಇಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT