ಗುರುವಾರ , ಡಿಸೆಂಬರ್ 5, 2019
24 °C

ಕವಿ ಅಭಿಷೇಕ್ ಬಳೆ ಅವರ ‘ಗೋರಿ ಮೇಲಿನ ಗಜಲ್’ ಸಂಕಲನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಬರಹಗಾರನಾದವನು ಸಾಮಾಜಿಕ ತಲ್ಲಣಗಳಿಗೆ ಧ್ವನಿ ಎತ್ತಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ದಸ್ತಗಿರಿ ಸಾಬ್ ದಿನ್ನಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಲೋಹಿಯಾ ಪ್ರತಿಷ್ಠಾನ ಹಾಗೂ ದೇವದುರ್ಗದ ಗುರುರಾಘವೇಂದ್ರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಯುವ ಕವಿ ಅಭಿಷೇಕ್ ಬಳೆ ‌ ಅವರ ’ಗೋರಿ ಮೇಲಿನ ಹೂ’ ಗಜಲ್ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

‘ಇಂದು ಅಮಾಯಕರ ಮೇಲೆ ದೌರ್ಜನ್ಯ, ಸುಲಿಗೆ, ಅತ್ಯಾಚಾರ, ಹಿಂಸೆಗಳು ನಡೆಯುತ್ತಿವೆ. ಇಂತಹ ಅನ್ಯಾಯಗಳ ವಿರುದ್ಧ ಇಂದಿನ ಕವಿಗಳು ತಮ್ಮ ಬರಹದಲ್ಲಿ ಸೂಕ್ಷ್ಮಪ್ರಜ್ಞೆಯನ್ನು ಬೆಳೆಸಿಕೊಂಡು ಕವಿತೆ, ಗಜಲ್, ಕವನ, ಲೇಖನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಬೇಕು’ ಎಂದು ಹೇಳಿದರು.

‘ಸಾಹಿತ್ಯದಲ್ಲಿಯೇ ವಿಶಿಷ್ಟವಾದದ್ದು ಗಜಲ್. ಮೋಹ–ಅನುರಾಗ, ಹೆಚ್ಚಾಗಿ ಒಳಗೊಂಡಿರುವ ಗಜಲ್ ಮೂಲತ ಅರಬ್ಬಿ ಶಬ್ಧವಾದರೂ ಉರ್ದು ಭಾಷೆಯಲ್ಲಿ ಗಾಲಿಬ್ ಅವರಿಂದ ಹೆಚ್ಚು ಜನಪ್ರಿಯಗೊಂಡಿವೆ. ಕನ್ನಡದಲ್ಲಿ ಮೊಟ್ಟ ಮೊದಲು ಗಜಲ್ ರಚಿಸಿದ ಶಾಂತರಸ ಅವರು ನಮ್ಮ ಜಿಲ್ಲೆಯವರೇ’ ಎಂದರು.

‘ಪ್ರಸ್ತುತ ಯುವಕರು ಮೊಬೈಲ್ ಅತಿಯಾಗಿ ಬಳಸುತ್ತಿರುವುದರಿಂದ ಸಂಬಂಧಗಳು ಕುಸಿಯುತ್ತಿವೆ. ಅದಕ್ಕೆ, ಸಾಹಿತ್ಯದ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೃತಿ ಕುರಿತು ಮಾತನಾಡಿದ ಸಾಹಿತಿ ಸಿದ್ಧರಾಮ ಹೊನ್ಕಲ್, ‘ಕವಿ ಅಭಿಷೇಕ್ ಬಳೆ ಅವರ ಗಜಲ್ ಸಂಕಲನದಲ್ಲಿ ಸಾಮಾಜಿಕ ಕಳಕಳಿ, ಪ್ರೀತಿ, ಪ್ರೇಮ, ಮಾನವೀಯ ಮೌಲ್ಯಗಳು ಅಡಗಿವೆ. ಕವಿಯ ಮನಸ್ಸಿನ ಅಂತರಾಳದ ಭಾವನೆಗಳು ವಿಚಾರಗಳಾಗಿ ಹೊರಹೊಮ್ಮಬೇಕು ಆಗಲೇ ಆ ಬರಹಕ್ಕೆ ಬೆಲೆ ಸಿಗುತ್ತದೆ’ ಎಂದರು.

‘ಈ ಸಂಕಲನದಲ್ಲಿ ಒಟ್ಟು 61 ಗಜಲ್‌ಗಳು ಇದ್ದು, ಅವುಗಳಲ್ಲಿ ಜನಪರ ಕಾಳಜಿ, ಕೋಮು ಸಾಮರಸ್ಯದಲ್ಲಿ ಬದುಕು ಕಟ್ಟಿಕೊಳ್ಳುವುದು, ಗೋರಿ ಮೇಲಿನ ಹೂ ಕೃತಿಯ ವಿಶೇಷತೆಯಾಗಿದೆ. ಯುವ ಕವಿಗಳು ಬರಹದ ಜತೆಗೆ ಬದುಕು ಕಟ್ಟಿಕೊಳ್ಳಬೇಕು’ ಎಂದು ಅವರು ತಿಳಿಸಿದರು. 

ಲೋಹಿಯಾ ಪ್ರತಿಷ್ಠಾನ ಅಧ್ಯಕ್ಷೆ ಕೆ.ಗಿರಿಜಾ ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ದಿಲ್ಷಾದ್ ಅಧ್ಯಕ್ಷತೆ ವಹಿಸಿದ್ದರು. ದೇವದುರ್ಗದ ಗುರುರಾಘವೇಂದ್ರ ಶಿಕ್ಷಣ ಸಂಸ್ಥೆ ಮತ್ತು ಟ್ರಸ್ಟ್‌ ಅಧ್ಯಕ್ಷ ನಾಗರಾಜ ಮನಾಪುರೆ, ಎಎಂಇ ಶಿಕ್ಷಣ ಸಂಸ್ಥೆಯ ಸದಸ್ಯ ಭೀಮನಗೌಡ ಇಟಗಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)