ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ತಲ್ಲಣ ಹೇಳುವ ವಿಶಿಷ್ಠ ಕೃತಿ: ಮಹಾಂತೇಶ್ ನವಲಕಲ್

Last Updated 24 ಜನವರಿ 2020, 12:49 IST
ಅಕ್ಷರ ಗಾತ್ರ

ರಾಯಚೂರು: ಕವಿ, ಕಥೆಗಾರ ಹಾಗೂ ಅನುವಾದಕ ಡಾ. ಬಸು ಬೇವಿನಗಿಡದ ಅವರು ಕನ್ನಡ ಸೃಜನಶೀಲ ಬರಹಗಾರರಲ್ಲಿ ಒಬ್ಬರು. ಅವರ ಕಥಾ ಸಂಕಲನ 'ನೆರಳಿಲ್ಲದ ಮರ' ಉತ್ತರ ಕರ್ನಾಟಕದ ಬದುಕಿನ ಸೊಗಡನ್ನು ಕಟ್ಟಿಕೊಡುವ ವಿಶಿಷ್ಟ ಕೃತಿಯಾಗಿದೆ ಎಂದು ಕಥೆಗಾರ ಮಹಾಂತೇಶ್ ನವಲಕಲ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೋಹಿಯಾ ಪ್ರತಿಷ್ಠಾನ ಹಾಗೂ ಚನ್ನಪಟ್ಟಣದ ಪಲ್ಲವ ಪ್ರಕಾಶನ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ’ನೆರಳಿಲ್ಲದ ಮರ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಗತೀಕರಣದ ಪರಿಣಾಮವಾಗಿ ಜನರಲ್ಲಿ ಜೀವನ ಪ್ರೀತಿ ಕಡಿಮೆಯಾಗುತ್ತಿದ್ದು, ಮಾನವೀಯತೆ ಹಾಗೂ ಗ್ರಾಮೀಣ ಬದುಕು ಕ್ರಮೇಣ ನಶಿಸುತ್ತಿದೆ. ಈ ಕಾರಣದಿಂದ ನಗರ ಹಾಗೂ ಗ್ರಾಮಗಳಲ್ಲಿ ಅನೇಕ ವೈರುಧ್ಯಗಳು ಸೃಷ್ಟಿಯಾಗಿ, ಜನ ನೆಮ್ಮದಿಯನ್ನು ಮರೆತು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅನೇಕ ಸಮಸ್ಯೆ ಹಾಗೂ ಸಂಗತಿಗಳನ್ನು ಕಥೆಯಲ್ಲಿ ಹಿಡಿದಿಡುವ ಜೊತೆಗೆ ಅವುಗಳ ಬಗ್ಗೆ ಸಂಪೂರ್ಣ ಒಳನೋಟವನ್ನು ನೀಡುವ ಕೆಲಸವನ್ನು ಬಸು ಬೇವಿನಗಿಡದ ಅವರು ತಮ್ಮ ಕಥೆಗಳಲ್ಲಿ ಮಾಡಿದ್ದಾರೆ ಎಂದು ಬಣ್ಣಿಸಿದರು.

ಆಕಾಶವಾಣಿ ರಾಯಚೂರು ಕಾರ್ಯಕ್ರಮದ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಮಾತನಾಡಿ, ಸವಾಲುಗಳು ಹಾಗೂ ಅನೇಕ ತಲ್ಲಣಗಳ ನಡುವೆ ಮನುಷ್ಯ ಜೀವಿಸುತ್ತಿದ್ದಾನೆ. ಆಧುನಿಕ ಬದುಕಿನ ವೇಗಕ್ಕೆ ಪ್ರತಿದಿನ ಹೊಸ-ಹೊಸ ಸವಾಲು ಹಾಗೂ ಸಮಸ್ಯೆಗಳು ಎದುರಾಗುತ್ತಿದ್ದು, ಅವುಗಳನ್ನು ಮೀರಿ ಬದುಕಬೇಕಾದ ಅನಿವಾರ್ಯತೆ ಇದೆ. ಸ್ವಾರ್ಥಪರ ಮನಸ್ಥಿತಿ ಹಾಗೂ ಅಜ್ಞಾನದಿಂದಾಗಿ ಕುಟುಂಬದ ಒಳ-ಹೊರಗೂ ರಾಜಕೀಯಗಳು ನಡೆಯುತ್ತಿರುತ್ತವೆ. ಇವೆಲ್ಲವನ್ನೂ ಮೀರಿ ನಿಂತಾಗಲೇ ಜೀವನಪ್ರೀತಿ ಮೆರೆಯಲು ಸಾಧ್ಯ ಎನ್ನುವುದನ್ನು ಬಸು ಬೇವಿನಗಿಡದ ಅವರು ತುಂಬ ಅರ್ಥಪೂರ್ಣವಾಗಿ ಕಥೆಗಳ ರೂಪದಲ್ಲಿ ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ದಸ್ತಗೀರ್‌ಸಾಬ್ ದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷೆ ಕೆ.ಗಿರಿಜಾ ರಾಜಶೇಖರ, ಕಾರ್ಯದರ್ಶಿ ಭೀಮೋಜಿರಾವ್ ಜಗತಾಪ್, ಪ್ರಾಧ್ಯಾಪಕ ಆರ್.ಮಲ್ಲನಗೌಡ, ಮಹಾದೇವಪ್ಪ, ಭೀಮನಗೌಡ ಇಟಗಿ, ಲೇಖಕ ರಾಜೇಂದ್ರ, ಮಂಡಲಗಿರಿ ಪ್ರಸನ್ನ, ವಿಜಯ್ ಸರೋದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT