ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಮಕ್ಕಳಿಗೆ ಪುಸ್ತಕ, ಸಮವಸ್ತ್ರ

ಹಬ್ಬದ ಸಂಭ್ರಮ, ಸಡಗರದೊಂದಿಗೆ ಶಾಲೆಗಳು ಆರಂಭ ಇಂದಿನಿಂದ
Last Updated 28 ಮೇ 2019, 19:30 IST
ಅಕ್ಷರ ಗಾತ್ರ

ರಾಯಚೂರು: 2019–20 ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಬುಧವಾರದಿಂದ ಆರಂಭವಾಗುತ್ತಿವೆ.

ರಜೆಯ ಮೋಜಿನಲ್ಲಿ ಮೈ ಮರೆತಿರುವ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಸೆಳೆಯಲು ಮೊದಲ ದಿನವನ್ನು ‘ಶಾಲಾ ಪ್ರಾರಂಭೋತ್ಸವ’ವೆಂದುಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿ, ಮಕ್ಕಳನ್ನು ಸ್ವಾಗತಿಸಲಾಗುವುದು. ಶಿಕ್ಷಕರೆಲ್ಲ ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡುವರು.

ಇನ್ನೊಂದು ವಿಶೇಷವೆಂದರೆ, ಶಾಲೆ ಆರಂಭವಾದ ಮೊದಲ ದಿನವೇ ಮಕ್ಕಳಿಗೆಲ್ಲ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಹಂಚಿಕೆ ಮಾಡುವ ಕಾರ್ಯ ಪೂರ್ಣಗೊಳಿಸಲಾಗಿದೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಅವರು ಹೇಳುವ ಪ್ರಕಾರ, ‘ಜಿಲ್ಲೆಯಾದ್ಯಂತ ಪಠ್ಯಪುಸ್ತಕಗಳೆಲ್ಲ ಶಾಲೆಗಳಿಗೆ ತಲುಪಿವೆ. ಬಾಲಕಿಯರಿಗೆ ಒಟ್ಟು ಬರಬೇಕಿದ್ದ 1,24,664 ಸಮವಸ್ತ್ರಗಳ ಪೈಕಿ 97,676 ಮಾತ್ರ ತಲುಪಿವೆ. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗಾಗಿ ಇನ್ನುಳಿದ 26,958 ಚೂಡಿದಾರ್‌ಗಳು ಬರಬೇಕಿದೆ’ ಎಂದರು.

’ಶಾಲೆಗೆ ಬರದೆ ಇರುವ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವ ಪ್ರಕ್ರಿಯೆ ಕೂಡಾ ನಡೆಯುತ್ತದೆ. ಶಾಲೆಗೆ ಬರುವ ಮಕ್ಕಳ ಹಾಜರಾತಿ, ಹೊಸ ಮಕ್ಕಳಿಗೆ ಪ್ರವೇಶಾತಿ ಪಕ್ರಿಯೆಗಳೆಲ್ಲ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಶಾಲಾ ಮೇಲುಸ್ತುವಾರಿಗಳ ಸಭೆಯನ್ನು ಈಚೆಗೆ ರಾಯಚೂರಿನಲ್ಲಿ ಆಯೋಜಿಸಲಾಗಿತ್ತು. ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಇತರೆ ವಿಷಯಗಳ ಬಗ್ಗೆಯೂ ಮುತೂವರ್ಜಿ ವಹಿಸುವುದಕ್ಕೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ’ ಎಂದು ಡಿಡಿಪಿಐ ತಿಳಿಸಿದರು.

ಶಾಲಾ ಅಭಿವೃದ್ಧಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ದಾಖಲಾತಿಗಳ ಜೋಡಣೆ, ತರಗತಿ ಅನುಸಾರ ಶಿಕ್ಷಕರಿಗೆ ಶಾಲಾ ವೇಳಾಪಟ್ಟಿ, ವಾರ್ಷಿಕ ಪಾಠ ಯೋಜನೆ ಮಾಡಿಕೊಳ್ಳುವುದಕ್ಕೆ ಶಿಕ್ಷಕರಿಗೆ ಅಗತ್ಯ ಸೂಚನೆಗಳನ್ನು ರವಾನಿಸಿರುವುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೆ ಅಗತ್ಯ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗುತ್ತಿದೆ. ಒಟ್ಟು 25 ಲಕ್ಷದಷ್ಟು ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ 20 ಲಕ್ಷದಷ್ಟು ಅಂದರೆ ಶೇ 70 ರಷ್ಟು ಪಠ್ಯಪುಸ್ತಕಗಳು ಬಂದು ತಲುಪಿವೆ. ಸರ್ಕಾರಿ ಶಾಲೆಗಳಿಗೆ ಆದ್ಯತೆ ವಹಿಸಿ ಈಗಾಗಲೇ ಪಠ್ಯಗಳನ್ನು ರವಾನಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಶಿಕ್ಷಕರ ಕೊರತೆ ಇದೆ. ಈ ನಿಟ್ಟಿನಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೂ ಡಿಡಿಪಿಐ ಕಚೇರಿಯಿಂದ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಪ್ರಾಥಮಿಕ ಶಾಲೆಗೆ 1,518 ಅತಿಥಿ ಶಿಕ್ಷಕರು, ಪ್ರೌಢಶಾಲೆಗೆ 199 ಅತಿಥಿ ಶಿಕ್ಷಕರ ಅಗತ್ಯವಿದೆ ಎಂದು ಕೋರಲಾಗಿದೆ. ಜೂನ್‌ನಲ್ಲಿ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT