ಬುಧವಾರ, ಏಪ್ರಿಲ್ 1, 2020
19 °C
ಶಾಸಕ ಡಿ.ಎಸ್‌ ಹೂಲಗೇರಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ; ಕಾಟಾಚಾರಕ್ಕೆ ಮಾಹಿತಿ ನೀಡಿದರೆ ಕ್ರಮ–ಎಚ್ಚರಿಕೆ

ಇಲಾಖೆಗಳಲ್ಲಿ ಭ್ರಷ್ಟಾಚಾರ; ಶಾಸಕ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ತಾಲ್ಲೂಕು ಭೂ ದಾಖಲೆಗಳ (ಸರ್ವೆ) ಇಲಾಖೆ ಸೇರಿ ಇತರೆ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಎಂದು ಶಾಸಕ ಡಿ.ಎಸ್‌ ಹೂಲಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಜನರ ಕೆಲಸ ಮಾಡಿಕೊಡಲು ₹ 10 ರಿಂದ ₹ 30ಸಾವಿರ ಲಂಚ ಪಡೆಯುತ್ತಿದ್ದೀರಿ. ಹಣ ನೀಡದವರ ಫೈಲ್‌ಗಳು ತಿರಸ್ಕೃತಗೊಳ್ಳುತ್ತಿವೆ. ಸರ್ಕಾರದಿಂದ ವೇತನ ಪಡೆದು ಲಂಚಕ್ಕೆ ಕೈಚಾಚುವ ಹೇಯ ಕೃತ್ಯ ಬಿಡದಿದ್ದರೆ ನಾಗಕರಿಂದಲೆ ಶಾಸ್ತಿ ಮಾಡಿಸುವುದಾಗಿ  ಎಚ್ಚರಿಕೆ ನೀಡಿದರು.

ಸರ್ವೆ ಇಲಾಖೆ ಮಾತ್ರವಲ್ಲದೆ ಇತರ ಇಲಾಖೆಗಳಲ್ಲೂ ಇದೇ  ಸ್ಥಿತಿ ಇದೆ. ನಿಯಮಾನುಸಾರ ಕೆಲಸ ಮಾಡಲು ಆಗದಿದ್ದರೆ ಜಾಗ ಖಾಲಿ ಮಾಡಬೇಕು. ಅನಗತ್ಯ ಕಾರಣ ಮುಂದಿಟ್ಟು ನಾಗರಿಕರನ್ನು ಸತಾಯಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬಾರದು. ಇಂತಹ ಘಟನೆಗಳು ಮರುಕಳಿಸಿದರೆ ಜನರ ಪರವಾಗಿ ತಾವು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯ ಸೇರಿ ಇತರ ಸಾಂಕ್ರಾಮಿಕ ಕಾಯಿಲೆಗಳು ಹರಡಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಂತಹ ಯಾವುದೇ ಮಾಹಿತಿಯನ್ನು ಸಭೆಗೆ ನೀಡಿಲ್ಲ. ಸಭೆಯಲ್ಲಿ ಕಾಟಾಚಾರದ ಮಾಹಿತಿ ನೀಡುವ ಅಗತ್ಯವಿಲ್ಲ. ರೋಗಗಳು ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಕೂಡಲೆ  ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ವರದಿ ಸಲ್ಲಿಸುವಂತೆ ಆರೋಗ್ಯ ಅಧಿಕಾರಿಗೆ ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆ ತಮ್ಮ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಹೂಳು ತೆಗೆಸುವ ಹಾಗೂ ಮುಳ್ಳುಕಂಟಿ ಕಟಾವು ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದು ಹಣ ದುರ್ಬಳಕೆ ಮಾಡುತ್ತಿದೆ. ಲೋಕೋಪಯೋಗಿ ಇಲಾಖೆ ಕೂಡ ಹಾಲಭಾವಿ ಗ್ರಾಮದಲ್ಲಿ ಭೋವಿ ಜನಾಂಗವೆ ಇಲ್ಲ. ಅವರ ಹೆಸರಿನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಕಂಬಳಿ, ಸಂಗಣ್ಣ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ನಿರೀಕ್ಷೆಗೂ ಮೀರಿದ ಅನುದಾನ ಬಿಡುಗಡೆ ಆಗಿದೆ. ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌, ಲೋಕೋಪಯೋಗಿ, ಕ್ಯಾಸುಟೆಕ್‌, ಭೂಸೇನಾ ನಿಗಮ ಅಧಿಕಾರಿಗಳು ಪ್ರಗತಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದೀರಿ. ಕ್ಷೇತ್ರದ ಜನತೆಗೆ ಮೊದಲ ಆದ್ಯತೆಯಾಗಿ ಕುಡಿಯುವ ನೀರು, ವಿದ್ಯುತ್‌, ರಸ್ತೆಯಂತ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು  ಹೇಳಿದರು.

 ಸಮಾಜಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಪರಿಶಿಷ್ಟ ಪಂಗಡ, ಅರಣ್ಯ, ತೋಟಗಾರಿಕೆ, ಜೆಸ್ಕಾಂ, ಶಿಶು ಅಭಿವೃದ್ಧಿ, ಕಾಡಾ, ಭೂಸೇನಾ ಸೇರಿ  ವಿವಿಧ ಇಲಾಖೆ ಅಧಿಕಾರಿಗಳು  ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ಅಸನುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಮನಸ್ಥಿತಿ ಮುಂದುವರಿದರೆ ಅಮಾನತು ಗೊತ್ತುವಳಿ ಸ್ವೀಕರಿಸಿ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸನಗೌಡ ಕಂಬಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು