ಶನಿವಾರ, ಸೆಪ್ಟೆಂಬರ್ 25, 2021
26 °C
ಸರ್ಕಾರಿ ಪ್ರೌಢಶಾಲಾ ಮತ್ತು ಆದರ್ಶ ವಿದ್ಯಾಲಯ ಮುಖ್ಯೋಪಾಧ್ಯಾಯರ ಸಭೆ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಸೇರಿಸಿ: ಶೇಖ್ ತನ್ವಿರ್ ಅಸೀಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಸೇರಿಸುವ ಕಾರ್ಯ ಅಚ್ಚುಕಟ್ಟಾಗಿ ಮಾಡಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಅಸೀಫ್ ಹೇಳಿದರು.

ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ‌ ಪಂಚಾಯಿತಿ, ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲೆಯ‌ ಎಲ್ಲಾ ಸರ್ಕಾರಿ ಪ್ರೌಢಶಾಲಾ ಮತ್ತು ಆದರ್ಶ ವಿದ್ಯಾಲಯ ಮುಖ್ಯೋಪಾಧ್ಯಾಯರ ಸಭೆ ಹಾಗೂ ಜಿಲ್ಲೆಯ‌ ಎಲ್ಲಾ ಅನುಷ್ಠಾಧಿಕಾರಿಗಳ‌ ಸಭೆ ಉದ್ಘಾಟನೆ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿಯೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯಗುರುಗಳು ಸಮರ್ಥವಾಗಿ ತಮ್ಮ ಕಾರ್ಯ ನಿರ್ವಹಿಸಿದ್ದು ಶ್ಲಾಘನೀಯ. ಈ ಬಾರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಜರಾತಿ ದಾಖಲಾತಿ ಶೇ 99.56 ರಷ್ಟು ಸಾಧಿಸಿದ್ದು ಅಭಿನಂದನೀಯ. ಶೇ 100 ರಷ್ಟು ದಾಖಲಾಗುವಂತೆ ಕೆಲಸ ಮಾಡಬೇಕು. ದಾಖಲಾತಿಯಿಂದ ಹೊರಗುಳಿದ ಹಾಗೂ ಪರೀಕ್ಷೆಯಲ್ಲಿ ಗೈರು ಹಾಜರಾದ ವಿದ್ಯಾರ್ಥಿಗಳನ್ನು ಗುರುತಿಸಿ ಸಪ್ಲಿಮೆಂಟರಿ ಪರೀಕ್ಷೆಯ ವೇಳೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯ ಶೈಕ್ಷಣಿಕ ಸುಧಾರಣೆಗೆ ಸ್ಮಾರ್ಟ್ ಕ್ಲಾಸ್, ನರೇಗಾ ಯೋಜನೆಯಡಿ ಪ್ರತಿ ಶಾಲೆಯಲ್ಲಿ ಭೋಜನಾಲಯ, ಮಾದರಿ ಶೌಚಾಲಯ, ಶಾಲೆಗೆ ಕಾಂಪೌಂಡ್ ಮತ್ತಿತರೆ ಆಧುನಿಕ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಲೆಯ ಮೂಲಸೌಕರ್ಯ ಹಾಗೂ ಸಮಸ್ಯೆಗಳ ಕುರಿತು ಮುಖ್ಯಗುರುಗಳು ಅಧಿಕಾರಿಗಳ ಗಮನಕ್ಕೆ ತರಬೇಕು. ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಸುಖದೇವ್ ಮಾತನಾಡಿ, ಈ ವರ್ಷ ಸಾಕಷ್ಟು ಒತ್ತಡದ ಮಧ್ಯೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಧಿಕಾರಿಗಳು ಹಾಗೂ ಮುಖ್ಯಗುರುಗಳು ಸಮರ್ಥವಾಗಿ ಎದುರಿಸಿದ ಶಾಲೆಯ ಫಲಿತಾಂಶ ಸುಧಾರಣೆಗೆ ಪ್ರಯತ್ನಪಟ್ಟಿದ್ದಾರೆ ಎಂದರು.

ಶಿಕ್ಷಕರು, ಮುಖ್ಯಗುರುಗಳ ತಮ್ಮ ಮನಸ್ತಾಪಗಳನ್ನು ಬದಿಗಿಟ್ಟು ವೈಯಕ್ತಿಕ ವರ್ತನೆಗಳು ಮಕ್ಕಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ಈ ವರ್ಷದ ಶೈಕ್ಷಣಿಕ ಸುಧಾರಣೆಗೆ ಹೊಸದಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸಬೇಕು ಎಂದರು.

ಕಲಬುರ್ಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ಎಸ್‌.ವರ್ಧನ್‌ ಪ್ರಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಡಯಟ್ ಕಾಲೇಜಿನ ಪ್ರಾಚಾರ್ಯ ರಾಮಚಂದ್ರಪ್ಪ, ಅಧಿಕಾರಿಗಳಾದ ಈರಣ್ಣ ಕೋಸಗಿ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ವೆಂಕಟೇಶ, ಆರ್. ಇಂದಿರಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.