ಗುರುವಾರ , ಡಿಸೆಂಬರ್ 5, 2019
20 °C

ಬಸ್‌ ನಿರ್ವಾಹಕರು, ಚಾಲಕರ ಮಧ್ಯೆ ವಾಲಿಬಾಲ್‌ ‘ಹಣಾಹಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರತಿದಿನ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಒತ್ತಡದಲ್ಲಿ ಮುಳುಗಿರುತ್ತಿದ್ದ ಸರ್ಕಾರಿ ಬಸ್‌ ಚಾಲಕರು ಮತ್ತು ನಿರ್ವಾಹಕರು ಎರಡು ದಿನಗಳ ಮಟ್ಟಿಗೆ ಎಲ್ಲ ಮರೆತು ವಾಲಿಬಾಲ್‌ ಆಟವಾಡುತ್ತಿದ್ದಾರೆ!

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ)ಯು ತನ್ನ ನೌಕರರಿಗಾಗಿ ಮಂಗಳವಾರದಿಂದ ಎರಡು ದಿನಗಳ ಅಂತರ್‌ ವಿಭಾಗೀಯ ಮಟ್ಟದ ವಾಲಿಬಾಲ್‌ ಪಂದ್ಯಾವಳಿಯನ್ನು ಆಯೋಜಿಸಿದೆ.

ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಅಧಿಕಾರಿ ಡಾ.ನೇಮಿಚಂದ್ರ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

‘‍ಪ್ರಯಾಣಿಕರ ಸೇವೆಯಲ್ಲಿ ನೌಕರರಿಗೆ ಒತ್ತಡ ಆವರಿಸಿಕೊಳ್ಳುವುದು ಸಹಜ. ಕ್ರೀಡಾ ಚಟುವಟಿಕೆಗಳು ಒತ್ತಡ ನಿವಾರಿಸಲು ಒಳ್ಳೆಯ ಪರಿಹಾರ. ಸಂಸ್ಥೆಯು ನೌಕರರಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ವಿಭಾಗೀಯ ಮುಖ್ಯ ತಾಂತ್ರಿಕ ಶಿಲ್ಪಿ ಎಂ.ಸಿ. ನಂಜುಂಡಪ್ಪ, ಮುಖ್ಯ ಸಂಚಾರ ವ್ಯವಸ್ಥಾಪಕ ಡಿ.ಕೊಟ್ರಪ್ಪ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಸುನೀಲಕುಮಾರ್‌ ಎಚ್‌. ಚಂದರಗಿ, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಆನಂದ ಬಂದ್ರಕಳ್ಳಿ ಇದ್ದರು. ಉಪ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಮಹಿಪಾಲರೆಡ್ಡಿ ನಿರೂಪಿಸಿದರು.

10 ತಂಡಗಳು ಭಾಗಿ: ಎನ್‌ಇಕೆಆರ್‌ಟಿಸಿ ವ್ಯಾಪ್ತಿ ಇರುವ ಏಳು ಜಿಲ್ಲೆಗಳಿಂದ ಒಟ್ಟು 10 ವಾಲಿಬಾಲ್‌ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ನೌಕರರು ಉತ್ಸಾಹದಿಂದ ಆಟವಾಡುತ್ತಿದ್ದು, ಪ್ರೋತ್ಸಾಹಿಸುವುದಕ್ಕಾಗಿ ಕೆಲವು ಸಹೋದ್ಯೋಗಿಗಳು ಭಾಗಿಯಾಗಿದ್ದಾರೆ. ಮುಖ್ಯವಾಗಿ ಆಡಳಿತ ವಿಭಾಗದ ಅಧಿಕಾರಿಗಳು ಪಂದ್ಯಾವಳಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಕೊಪ್ಪಳ, ಬೀದರ್, ವಿಜಯಪುರ, ರಾಯಚೂರು ಜಿಲ್ಲೆಗಳಿಂದ ತಲಾ ಒಂದು ತಂಡಗಳು ಭಾಗವಹಿಸಿವೆ. ಯಾದಗಿರಿ, ಕಲಬುರ್ಗಿ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಎರಡು ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿವೆ.

ಸಮಾರೋಪ ಇಂದು

ನವೆಂಬರ್‌ 20 ರಂದು ಬೆಳಿಗ್ಗೆ 11.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಸ್‌.ಕೆ. ಮೇಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ಅಧ್ಯಕ್ಷತೆ ವಹಿಸುವರು.

ಪ್ರತಿಕ್ರಿಯಿಸಿ (+)