ಕವಿತಾಳ: ಶಾಲಾ, ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ಬಾರದಿರುವುದು ಮತ್ತು ವೇಗಧೂತ ಬಸ್ ನಿಲುಗಡೆಗೆ ಆಗ್ರಹಿಸಿ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ವಿದ್ಯಾರ್ಥಿಗಳು ಸೋಮವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಅಮೀನಗಡ ಸೇರಿದಂತೆ ಸುತ್ತಮುತ್ತಲಿನ ಕಾಚಾಪುರ, ಯತಗಲ್, ನೆಲಕೊಳ ಮತ್ತಿತರ ಗ್ರಾಮಗಳ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ ಕಾಲೇಜಿಗೆ ಲಿಂಗಸುಗೂರಿಗೆ ತೆರಳುತ್ತಾರೆ. ಅಂತರ್ ರಾಜ್ಯ ಸಂಚರಿಸುವ ಬಸ್‌ಗಳಿಗೆ ವಿದ್ಯಾರ್ಥಿ ಪಾಸ್‌ಗೆ ಅನುಮತಿ ಇಲ್ಲದಿರುವುದು ಮತ್ತು ಕವಿತಾಳದಲ್ಲಿಯೇ ವಿದ್ಯಾರ್ಥಿಗಳಿಂದ ಬಸ್ ತುಂಬಿದೆ ಎನ್ನುವ ಕಾರಣಕ್ಕೆ ಅಮೀನಗಡದಲ್ಲಿ ನಿಲುಗಡೆ ಮಾಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಾಲ್ಕ ಬಸ್‌ಗಳನ್ನು ಒಂದು ತಾಸು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ಬೆಳಿಗ್ಗೆ 8 ಗಂಟೆಗೆ ಕಾಲೇಜು ಆರಂಭವಾಗುತ್ತದೆ. ಬೆಳಿಗ್ಗೆ ಬರುವ ಬಾಗಲಕೋಟೆ–ರಾಯಚೂರು ಒಂದು ಬಸ್ ಬಿಟ್ಟರೆ ಬೇರೆ ಬಸ್ ಇಲ್ಲ. ಹೆಚ್ಚಿನ ಪ್ರಯಾಣಿಕರರನ್ನು ತುಂಬಿಕೊಂಡು ಬರುವ ಬಸ್‌ಗಳು ಅಮೀನಗಡದಲ್ಲಿ ನಿಲುಗಡೆ ಮಾಡುವುದಿಲ್ಲ. ಹೀಗಾಗಿ ಕಾಲೇಜಿನಲ್ಲಿ ಪ್ರತಿದಿನ ಮೊದಲ ಅವಧಿ ತಪ್ಪುತ್ತಿದೆ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
‘ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಬಿಡಬೇಕು. ವೇಗಧೂತ ಬಸ್‌ಗಳ ನಿಲುಗಡೆ ಮತ್ತು ಅಂತರ್ ರಾಜ್ಯ ಸಂಚರಿಸುವ ಬಸ್‌ಗಳಲ್ಲಿ ಪಾಸ್‌ಗೆ ಅನುಮತಿ ನೀಡುಬೇಕು’ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಕವಿತಾಳ ಠಾಣೆ ಪೊಲೀಸರು ಡಿಪೋ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದ ನಂತರ ವಿದ್ಯಾರ್ಥಿಗಳು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.