ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಂಸ್ಕೃತಿಕ ತಳಹದಿಯಲ್ಲಿ ದೇಶದ ಅಭಿವೃದ್ಧಿ’

ಭಾರತ ವಿಕಾಸ ಪರಿಷತ್‌ ಪ್ರಾಂತೀಯ ಕಾರ್ಯಾಗಾರ ಆರಂಭ
Last Updated 8 ಜೂನ್ 2019, 12:58 IST
ಅಕ್ಷರ ಗಾತ್ರ

ರಾಯಚೂರು: ದೇಶವನ್ನು ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ನೈತಿಕತೆಯ ತಳಹದಿಯಲ್ಲಿ ಅಭಿವೃದ್ಧಿ ಮಾಡಬೇಕು ಎನ್ನುವ ಸದುದ್ದೇಶದೊಂದಿಗೆ ಭಾರತ ವಿಕಾಸ ಪರಿಷತ್‌ ಕಾರ್ಯಯೋಜನೆ ರೂಪಿಸಿ ಕೆಲಸ ಮಾಡುತ್ತಿದೆ ಎಂದು ಪರಿಷತ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಶ ಜೈನ್‌ ಹೇಳಿದರು.

ನಗರದ ಸಂತೋಷ್‌ ಸರೋವರ ಸಭಾಂಗಣ ಶನಿವಾರದಿಂದ ಆರಂಭವಾದ ಎರಡು ದಿನಗಳ ‘ದಕ್ಷಿಣ ವಲಯದ ಉತ್ತರ ಕರ್ನಾಟಕ ಪ್ರಾಂತೀಯ ಕಾರ್ಯಾಗಾರ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

1963 ರಲ್ಲಿ ಭಾರತ ವಿಕಾಸ ಪರಿಷತ್‌ ಸ್ಥಾಪನೆಯಾಗಿದ್ದು, ಸಾಮಾಜಿಕ–ಸಾಂಸ್ಕೃತಿಕ ಸ್ವಯಂಸೇವಾ ಸಂಘಟನೆಯಾಗಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದೆ. ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಭಾವವನ್ನು ಜನರಲ್ಲಿ ಮೂಡಿಸುತ್ತಿದೆ. ಸ್ವಚ್ಛ, ಸಮರ್ಥ, ಸಾಂಸ್ಕೃತಿಕ ಭಾರತ ಎನ್ನುವ ಧ್ಯೇಯವಾಕ್ಯದಡಿಯಲ್ಲಿ ದೇಶವನ್ನು ಆರ್ಥಿಕವಾಗಿ ಮತ್ತು ನೈತಿಕವಾಗಿ ಗಟ್ಟಿಗೊಳಿಸುವ ಕೆಲಸ ನಿರಂತರ ನಡೆಸಲಾಗುತ್ತಿದೆ ಎಂದರು.

ಸಮಾಜದಲ್ಲಿರುವ ಆದರ್ಶವಾದಿಗಳು, ಗೌರವಾನ್ವಿತ ನಾಗರಿಕರು, ಹಾಗೂ ಸಮಾಜಕ್ಕೆ ಕೊಡುಗೆ ನೀಡಬಯಸುವವರನ್ನು ಪರಿಷತ್‌ ಒಗ್ಗೂಡಿಸುತ್ತದೆ. ಈ ಮೂಲಕ ಬಡವರು, ಅಂಗವಿಕಲರು ಹಾಗೂ ಅನಕ್ಷರಸ್ಥರು ಸಶಕ್ತರಾಗಲು ನೆರವಾಗುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಪರ್ಕ, ಸಹಯೋಗ, ಸಂಪರ್ಕ, ಸೇವಾ ಹಾಗೂ ಸಮರ್ಪಣ ಎನ್ನುವ ಐದು ಸೂತ್ರಗಳಡಿಯಲ್ಲಿ ಪರಿಷತ್‌ನಿಂದ ಕಾರ್ಯ ಚಟುವಟಿಕೆಗಳನ್ನು ಯೋಜಿಸಲಾಗಿದೆ. ಸರ್ಕಾರೇತರ ಸಂಸ್ಥೆಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಪರಿಷತ್‌ ಸಂಸ್ಕಾರ ಮತ್ತು ಸೇವೆಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ. ಹಣಕಾಸು ವಿಷಯಕ್ಕಿಂತಲೂ ಸೇವಾ ಬದ್ಧತೆಯನ್ನು ಅನುಸರಿಸಿಕೊಂಡು ಹೋಗುವುದನ್ನು ಪರಿಷತ್‌ನ ಪದಾಧಿಕಾರಿಗಳಿಗೆ ಮನವರಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧಾ ವಿಭಾಗದ (ಎನ್‌ಜಿಎಸ್‌ಸಿ) ರಾಷ್ಟ್ರೀಯ ಉಪಾಧ್ಯಕ್ಷ ಜಗದೀಶ ಮಾಳಗಿ, ಮಹಿಳಾ ಮತ್ತು ಬಾಲ ವಿಕಾಸ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿ ಸುನೀತ್‌ ಜಿ. ಪುರೋಹಿತ, ರಾಷ್ಟ್ರೀಯ ಸಂಪರ್ಕ ಸದಸ್ಯ ಗೋವಿಂದ ಕುಲಕರ್ಣಿ, ದಕ್ಷಿಣ ವಲಯದ ರಾಷ್ಟ್ರೀಯ ಕಾರ್ಯದರ್ಶಿ ಉದಯ ರೇವಂಕರ್‌ ಇದ್ದರು.

ಕೆ. ನರಸಿಂಹಮೂರ್ತಿ ಅಪ್ಪನ್‌ ಸ್ವಾಗತಿಸಿದರು.

ಆನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳನ್ನು ನಡೆಸಲಾಯಿತು. ದೇಶದ ವಿವಿಧೆಡೆಯಿಂದ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT