ಶನಿವಾರ, ಜುಲೈ 24, 2021
21 °C

ಕೇಂದ್ರದ ಆಡಳಿತ ವೈಫಲ್ಯದ ವಿರುದ್ಧ ಜನಾಂದೋಲನ: ಎಸ್.ಆರ್ ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನರೇಂದ್ರ ಮೋದಿ ಅತ್ಯಂತ ಬೇಜವಾಬ್ದಾರಿ ಪ್ರಧಾನಿಯಾಗಿದ್ದು, ಪೂರ್ವಭಾವಿ ತಯಾರಿ ನಡೆಸದೇ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ವಲಸೆ ಕಾರ್ಮಿಕರು, ದುಡಿಯುವ ಜನರು ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಇದು ಮೂರ್ಖತನದ ನಿರ್ಧಾರ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಚಾಲಕ ಎಸ್. ಆರ್. ಹಿರೇಮಠ ಟೀಕಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸಿದ ಕಾರ್ಮಿಕರು ಈಗಲೂ ತೊಂದರೆಯಲ್ಲಿದ್ದಾರೆ. ಮುಂಬೈ, ಮಹಾರಾಷ್ಟ್ರ ಮತ್ತಿತರೆಡೆಯಿಂದ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ಹೋಗಲು ಆಗದೇ ಕಾಲ್ನಡಿಗೆ ಮೂಲಕ ಹೋಗುವಾಗ ಹಲವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದರು.

ನಿರುದ್ಯೋಗ, ಅರ್ಥಿಕ ಹಿಂಜರಿತವಾಗಿ ದೇಶ ನರಳುತ್ತಿರುವಾಗ ಕೊರೊನಾ ಲಾಕ್ ಡೌನ್ ಮತ್ತಷ್ಟು ಜರ್ಜರಿತಗೊಳಿಸಿದೆ. ದೇಶದ ಬಡಜನತೆಗೆ ಸಂಕಷ್ಟಕ್ಕೆ ಸ್ಪಂದಿಸಿ ಗೌರವಯುತ ಜೀವನ ನಡೆಸಲು ನೀಡುವುದು ಸರ್ಕಾರದ ಕರ್ತವ್ಯ. ಇದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.

ಜಾತ್ಯತೀತ ರಾಷ್ಟ್ರದಲ್ಲಿ ‌ಸಮಾನತೆ, ಭ್ರಾತೃತ್ವ ಮರೆಯಾಗಿ ಕೋಮು ಗಲಭೆಗೆ ಕುಮ್ಮಕ್ಕು ನೀಡುವ ಕೆಲಸವಾಗುತ್ತಿದೆ. ಬಡವರ, ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ನಿರುದ್ಯೋಗ, ವಲಸೆ ಕಾರ್ಮಿಕರ ಸಮಸ್ಯೆ, ಅಸ್ಪೃಶ್ಯತೆ ಇನ್ನೂ ತಾಂಡವಾಡುತ್ತಿದೆ. ಸಂವಿಧಾನ ಚೌಕಟ್ಟಿನಲ್ಲಿ ಮೋದಿ ಸರ್ಕಾರ ಅಧಿಕಾರ ನಡೆವಲ್ಲಿ ಎಡವಿದೆ ಎಂದು ದೂರಿದರು.

ದೇಶದ ಜನರನ್ನು ಜಾಗೃತಿಗೊಳಿಸಲು ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಮರುಸ್ಥಾಪನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬುದ್ದಿಜೀವಿಗಳ ಮೇಲೆ ಪೊಲೀಸ್ ದಬ್ಬಾಳಿಕೆ, ವಲಸೆ ಕಾರ್ಮಿಕರಿಂದ ಉಂಟಾಗಿರುವ ಸಮಸ್ಯೆ ಹಾಗೂ ಆಡಳಿತ ವೈಲ್ಯದ ವಿರುದ್ಧ ಆಗಸ್ಟ್ 9ರಿಂದ 16ರವರೆಗೆ ಜಸ್ಟೀಸ್ ಡೇ ಆಂದೋಲನಾ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ಆನಂತರ ಗಾಂಧೀಜಿ ಅವರ ಜನ್ಮದಿನದಿಂದ ಜಯಪ್ರಕಾಶ ನಾರಾಯಣ ಅವರ ಜನ್ಮದಿನದವರೆಗೆ ವಿವಿಧ ಹಂತದ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಧಾನಿ ಮೋದಿ ಪ್ರಜಾಪ್ರಭತ್ವದ ವೌಲ್ಯಗಳನ್ನು ಗಾಳಿಗೆ ತೂರಿದ್ದು, ವ್ಯಕ್ತಿ ಆರಾಧನೆಯನ್ನು ಪೋಷಿಸುತ್ತಿದ್ದಾರೆ. ಡಾ.ಆನಂದ್ ತೇಲ್‍ತುಂಬ್ಡೆ ಮತ್ತು ಇತರ ಹೋರಾಟಗಾರರ ಮೇಲೆ ಪೋಲೀಸ್ ದೌರ್ಜನ್ಯ ಮಾಡುತ್ತಿದ್ದಾರೆ. ಆ.9ರಂದು ಉಪವಾಸ ವ್ರತ ನಡೆಸಲಾಗುತ್ತಿದ್ದು, ನಂತರದ ದಿನಗಳಲ್ಲಿ ಡಾ.ಆನಂದ್ ತೇಲ್‍ತುಂಬ್ಡೆ, ಗೌತಮ್ ನವಲ್‍ಕರ್ ಬರಹಗಳ ಬಗ್ಗೆ ಸಂವಾದ, ಅಂಬೇಡ್ಕರ್ ಬರಹ, ಚಿಂತನೆಗಳ ಬಗ್ಗೆ ಚರ್ಚೆ, ಸಹಿ ಸಂಗ್ರಹ ನಡೆಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಸರ್ಕಾರದ ತೀರ್ಮಾನದಂತೆ ಪ್ರಸ್ತುತ ಭಾನುವಾರ ಲಾಕ್‍ಡೌನ್ ನಡೆಸುವ ಕಾರ್ಯ ಸರಿಯಾಗಿದೆ ಎಂದು ತಿಳಿಸಿದರು.

ಸಂಘಟನೆ ಪದಾಧಿಕಾರಿಗಳಾದ ರಾಘವೇಂದ್ರ ಕುಷ್ಟಗಿ, ಜಾನ್‍ವೆಸ್ಲಿ, ಖಾಜಾ ಅಸ್ಲಂ ಅಹ್ಮದ್, ವೀರಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು