ಶನಿವಾರ, ಫೆಬ್ರವರಿ 22, 2020
19 °C
ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆ: ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ವಿವರಣೆ

ರಾಯಚೂರು: ಕೇಂದ್ರದಿಂದ ಜಿಲ್ಲೆಗೆ ₹110 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆ’ಯಡಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಸಣ್ಣ ರೈತರ ಖಾತೆಗಳಿಗೆ ಇಲ್ಲಿಯವರೆಗೂ ₹110 ಕೋಟಿ ಮೊತ್ತ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ವಿವರಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ಪ್ರತಿವರ್ಷ ಒಟ್ಟು ₹6 ಸಾವಿರ ಪ್ರೋತ್ಸಾಹಧನ ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮೆ ಆಗುತ್ತಿದೆ. ಸಣ್ಣ ರೈತರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. 2018-19 ನೇ ಮಾರ್ಚ್‌ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

2018–19ನೇ ಸಾಲಿನಲ್ಲಿ ಆರಂಭದಲ್ಲಿ 1,95,516 ರೈತರಿಗೆ ₹2 ಸಾವಿರ ಪಾವತಿಸಲಾಗಿದೆ. 2019–20ನೇ ಸಾಲಿನಲ್ಲಿ ಮೊದಲನೇ ಹಂತದಲ್ಲಿ 1,84,215 ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಎರಡನೇ ಕಂತಿನಲ್ಲಿ 1,44,466 ಜನರಿಗೆ ಹಾಗೂ ಮೂರನೇ ಕಂತಿನಲ್ಲಿ 22,451 ರೈತರಿಗೆ ಹಣ ಜಮೆ ಮಾಡಲಾಗಿದೆ. ಈ ಪ್ರಕ್ರಿಯೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ₹4 ಸಾವಿರ ರೈತರಿಗೆ ನೀಡಲು ರಾಜ್ಯ ಸರ್ಕಾರದಿಂದ ₹57 ಕೋಟಿ ಅನುದಾನ ಬಿಡುಗಡೆಯಾಗಿದೆ. ₹4 ಸಾವಿರ ಜಿಲ್ಲೆಯಾದ್ಯಂತ 1,42,625 ರೈತರಿಗೆ ಪ್ರೋತ್ಸಾಹಧನ ಜಮಾ ಮಾಡಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಕೆಲವು ರೈತರ ಹೆಸರುಗಳು ತಾಂತ್ರಿಕ ಸಮಸ್ಯೆಯಿಂದ ಬಿಟ್ಟುಹೋಗಿದೆ. ಹಣವು ಸಂಬಂಧಿಸಿದವರ ಖಾತೆಗೆ ಜಮಾ ಆಗಿಲ್ಲ ಎನ್ನುವ ಆಕ್ಷೇಪಣೆಗಳು ಬಂದಿವೆ. ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಭೂಮಿ ತಂತ್ರಾಂಶದಲ್ಲಿ ಸೇರ್ಪಡೆಯಾಗದೇ ಇರುವವರದ್ದು ಹಾಗೂ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗದೇ ಇರುವ ರೈತರಿಗೆ ಹಣ ಜಮಾ ಆಗಿಲ್ಲ. ಇಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕೆಲಸ ಪ್ರಗತಿಯಲ್ಲಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಲಾಭವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೊಂಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್. ಕುಲಕರ್ಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಭೀದ್, ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ದೀಪಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)