ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗಾಗಿ ಬಿಜೆಪಿಗೆ ಮಹುಮತ ನೀಡಿ: ಕೇಂದ್ರ ಗೃಹಸಚಿವ ಅಮಿತ್‌ ಷಾ

ವಿವಿಧ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್‌ ಷಾ
Last Updated 26 ಮಾರ್ಚ್ 2023, 13:37 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಬಿಜೆಪಿಯನ್ನು ಬಹುಮತದಿಂದ ಆಯ್ಕೆ ಮಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಕೋರಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ₹4,138 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭಾನುವಾರ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಲೂಟಿ ಮಾಡುವುದನ್ನು ಬಿಟ್ಟರೆ‌ ಬೇರೆನೂ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದು, ಇಲ್ಲಿನ ಹಣವನ್ನು ದೆಹಲಿಗೆ ಕಳುಹಿಸುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು.

ಈ ಹಿಂದೆ ನಡೆದ ಚುನಾವಣೆಯಲ್ಲಿ 35 ರಷ್ಟು ಸೀಟುಗಳನ್ನು ಗೆದ್ದಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ಕಂಕುಳನ್ನು ಏರಿ ಸರ್ಕಾರ ರಚನೆ ಮಾಡಿದ್ದರು. ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ 104 ಅತಿಹೆಚ್ಚು ಸ್ಥಾನಗಳನ್ನು ಜನರು ನೀಡಿದ್ದರು. ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಬಿಜೆಪಿಗೆ ಬಹುಮತ ನೀಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.

ರಾಜ್ಯದಲ್ಲಿಅಲ್ಪಸಂಖ್ಯಾತರಿಗೆ ಇದ್ದ ಶೇ 4 ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಲಿಂಗಾಯತರಿಗೆ ಶೇ 2 ಹಾಗೂ ಒಕ್ಕಲಿಗರಿಗೆ ಶೇ 2 ರಷ್ಟು ವಿಂಗಡನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಶ್ಲಾಘನೀಯ ಎಂದರು.

ಕಾಂಗ್ರೆಸ್‌ನಿಂದ ರಾಜ್ಯವನ್ನು ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಜನರನ್ನು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ನುಸುಳುಕೋರರು ದೇಶದ ಸೈನಿಕರು ರುಂಡ ಕತ್ತರಿಸುತ್ತಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದರು. ದೇಶದ ಸುರಕ್ಷತೆಗೆ ಕ್ರಮ ವಹಿಸಿದ್ದಾರೆ. ಹೀಗಾಗಿ ಯಾವುದೇ ನುಸುಳುಕೋರರ ಭಯ ಈಗ ಇಲ್ಲ ಎಂದು ಹೇಳಿದರು.

130 ಕೋಟಿ ಜನರಿಗೂ ಕೋವಿಡ್‌ ಲಸಿಕೆ ಉಚಿತವಾಗಿ ತಲುಪಿಸಿರುವ ಪ್ರಧಾನಿ, ಎಲ್ಲರನ್ನು ಸುರಕ್ಷಿತವಾಗಿಟ್ಟಿದ್ದಾರೆ. ಹೈದರಾಬಾದ್‌ ಕರ್ನಾಟಕವಾಗಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಿರುವ ಬಿಜೆಪಿ, ಈ ವರ್ಷ ಅಭಿವೃದ್ಧಿಗಾಗಿ ₹5 ಸಾವಿರ ಕೋಟಿ ಮೀಸಲಿರಿಸಿದೆ ಎಂದು ತಿಳಿಸಿದರು.

ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲವನ್ನು ಕಳೆದುಕೊಳ್ಳುತ್ತಿದೆ. ಈಶಾನ್ಯ ಭಾಗದ ಮೂರು ರಾಜ್ಯಗಳಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿವೆ. ₹4,238 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಅಮಿತ್‌ ಷಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

‘ನಾನು ಹವ್ಯಾಸಿ ರಾಜಕಾರಿಣಿ ಅಲ್ಲ, ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ. ದೇವದುರ್ಗವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು, ಗುಳೆ ಹೋಗುವುದನ್ನು ತಪ್ಪಿಸಬೇಕು, ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು, ನೀರಾವರಿ ಕಲ್ಪಿಸಬೇಕಿದೆ. ಇದಕ್ಕಾಗಿ ಬಿಜೆಪಿಗೆ ಬಹುಮತ ನೀಡಿ’ ಎಂದು ಕೋರಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದ 70 ವರ್ಷಗಳ ಬಳಿಕ ದೇವದುರ್ಗಕ್ಕೆ ಅನುದಾನ ಸಾಕಷ್ಟು ದೊರೆಯುತ್ತಿದ್ದು, ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೇಡಿಕೆ ಏಮ್ಸ್‌ ಸ್ಥಾಪಿಸಬೇಕು ಎನ್ನುವುದು. ಈ ಬೇಡಿಕೆಯನ್ನು ಅಮಿತ್‌ ಷಾ ಅವರು ಈಡೇರಿಸಲು ಕ್ರಮ ವಹಿಸಬೇಕು ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಯಚೂರು–ಯಾದಗಿರಿ ಜಿಲ್ಲೆಗಳಲ್ಲಿ ಎರಡನೇ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಇತ್ತೀಚೆಗೆ ಯಾದಗಿರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಕೋದಿ ಅವರು ಭಾಗವಹಿಸಿ ಕೋಟ್ಯಂತರ ಮೊತ್ತದ ಅಭಿವೃದ್ಧಿಗೆ ಚಾಲನೆ ನೀಡಿದರು. ಕೃಷ್ಣಾ ಭಾಗ್ಯ ನಿಗಮದಡಿ ಸ್ಕಾಡಾ ಜಾರಿ ಮಾಡಿರುವ ರೀತಿ ತುಂಗಭದ್ರಾ ಕಾಲುವೆಗೂ ಸ್ಕಾಡಾ ಮಾಡಬೇಕು. ರಾಯಚೂರು ಜಿಲ್ಲೆಯಲ್ಲಿ ಏಮ್ಸ್‌ ಸ್ಥಾಪಿಸಬೇಕು ಕ್ರಮ ವಹಿಸಬೇಕು’ ಎಂದು ಕೋರಿದರು.

ರಾಯಚೂರು ಜಿಲ್ಲೆಯ ಹೆಸರನ್ನು ಅಮಿತ್‌ ಷಾ ಅವರು 'ರಾಯಪೂರ' ಎಂದು ಭಾಷಣದುದ್ದಕ್ಕೂ ಉಲ್ಲೇಖಿಸಿ ಮಾತನಾಡಿದ್ದು ಜನರನ್ನು ಚರ್ಚೆಗೀಡು ಮಾಡಿತು.

ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ಶಾಸಕ ಶಿವನಗೌಡ ನಾಯಕ ಹಾಗೂ ಸಂಸದ ರಾಜಾ ಅಮರೇಶ್ವರ ನಾಯಕ ಅವರು ತಮ್ಮ‌ ಭಾಷಣದಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಅಮಿತ್ ಷಾ ಅವರು ಭಾಷಣದಲ್ಲಿ ಎಲ್ಲಿಯೂ ಏಮ್ಸ್ ಹೆಸರು ಉಲ್ಲೇಖಿಸಲೇ ಇಲ್ಲ.

ಸಂಸದ ಭಗವಂತ ಖೂಬಾ, ಮುಖಂಡರಾದ ಮಾನಪ್ಪ ವಜ್ಜಲ್‌, ತಿಪ್ಪರಾಜ ಹವಾಲ್ದಾರ್‌, ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್‌ ಕುರೇರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT