ಶುಕ್ರವಾರ, ನವೆಂಬರ್ 22, 2019
23 °C

‘ಪ್ರಾಯೋಗಿಕವಾಗಿಯೂ ಬದಲಾವಣೆ ಅಗತ್ಯ’

Published:
Updated:

ರಾಯಚೂರು: ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ಸೈದ್ಧಾಂತಿಕವಾಗಿ ಮಾತ್ರವಲ್ಲದೇ ಪ್ರಾಯೋಗಿಕವಾಗಿಯೂ ಬದಲಾವಣೆ ಆಗಬೇಕು. ಅಂದಾಗ ಮಾತ್ರ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ವಿಶ್ರಾಂತ ಕುಲಪತಿ ಡಾ. ಬಿ.ವಿ.ಪಾಟೀಲ ಹೇಳಿದರು.

ನಗರದ ಟ್ಯಾಗೋರ್‌ ಸ್ಮಾರಕ ಶಿಕ್ಷಣ ಸಂಸ್ಥೆಯ ಎಸ್‌ಆರ್‌ಕೆ ಶಿಕ್ಷಣ ಕಾಲೇಜಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಕೌನ್ಸಿಲ್‌ ಗ್ರಾಮೀಣ ಶಿಕ್ಷಣ ಸಹಯೋಗದಿಂದ ಮಂಗಳವಾರ ಆಯೋಜಿಸಿದ್ದ ’ನಯಿ ತಾಲೀಮ್, ಅನುಭವ ಕಲಿಕೆ ಮತ್ತು ಕಾರ್ಯ ಶಿಕ್ಷಣ’ ಕುರಿತು ಐದು ದಿನದ ಉಪನ್ಯಾಸ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಉತ್ಪಾದನೆಯಲ್ಲಿ ದೇಶ ಗಣನೀಯವಾದ ಸಾಧನೆ ಮಾಡಿದ್ದು, ಉತ್ತಮ ಭೂಮಿ ಕಡಿಮೆಯಾದರೂ ಸಾಧನೆ ಗಣನೀಯವಾಗಿ ಸಾಧನೆಯಾಗಲು ಶಿಕ್ಷಣದ ಸಾಧನೆಯೂ ಆಗಿದೆ ಎಂದರು.

ಎಂಜಿಎನ್‌ಸಿಆರ್‌ಇ ಸಂಪನ್ಮೂಲ ವ್ಯಕ್ತಿ ದಿವಾಕರ್ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಣದಲ್ಲಿ ನಯಿ ತಾಲೀಮನ ಅವಶ್ಯಕತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಕೌನ್ಸಿಲ್ ಗ್ರಾಮೀಣ ಶಿಕ್ಷಣದ ಉದ್ದೇಶಗಳು ಮತ್ತು ದೃಷ್ಟಿ ಕೋನಗಳ ಬಗ್ಗೆ ವಿವರಿಸಿದರು.

ಕನ್ನಿಕಾಪರಮೇಶ್ವರಿ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಎ.ಆರ್.ಪುರ್ವಂಥ್ ಮಾತನಾಡಿ, ಗಾಂಧೀಜಿಯ ದೃಷ್ಟಿಕೋನ ಮತ್ತು ಮೌಲ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಶಿಕ್ಷಣಾರ್ಥಿಗಳಲ್ಲಿ ಮೌಲ್ಯಗಳು ಬೆಳೆಸಿದರೆ ಮುಂದಿನ ಪೀಳಿಗೆಗೆ ಉತ್ತಮ ಸಾಧನೆ ಕಾಣಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜಪಾಟೀಲ್ ಮಾತನಾಡಿದರು. ಪ್ರಾಚಾರ್ಯೆ ಅರುಣಾಕುಮಾರಿ ಸ್ವಾಗತಿಸಿದರು. ರತನ್‌ ಚೌಹಾಣ್ ವಂದಿಸಿದರು. ವಿರೂಪಾಕ್ಷಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)