ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ | ಮೆಣಸಿನಕಾಯಿ ಬೆಳೆಗೆ ಸಿಡಿರೋಗ: ಅತಂಕದಲ್ಲಿ ರೈತ

Last Updated 3 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ದೇವದುರ್ಗ: ಹತ್ತಿಗೆ ಗುಲಾಬಿ ಕಾಯಿಕೋರಕ ರೋಗ ಬಾಧಿಸಿದ್ದರೆ, ಸೂರ್ಯಕಾಂತಿ, ಜೋಳಕ್ಕೆ ಲದ್ದಿ ಹುಳಗಳ ಕಾಟ. ಈಗ ಮೆಣಸಿನಕಾಯಿ ಬೆಳೆಗೆ ಸಿಡಿರೋಗ (ನೆಟೆರೋಗ) ಹಾಗೂ ಬೂದಿರೋಗ ಬಾಧಿಸುತ್ತಿರುವುದು ರೈತರ ಅತಂಕ ಹುಟ್ಟುಹಾಕಿದೆ.

ಎಲ್ಲ ಬೆಳೆಗಳಿಗೆ ಒಂದಲ್ಲ ಒಂದು ರೋಗ ಆವರಿಸಿದೆ. ರೋಗ ನಿರ್ವಹಣೆಗೆ ರಾಯಚೂರು ಕೃಷಿ ವಿಜ್ಞಾನಿಗಳ ಕೇಂದ್ರದಿಂದ ತಜ್ಞರು ರೈತರ ಜಮೀನಿಗೆ ಭೇಟಿ ನೀಡಿ ಅಗತ್ಯ ಸಲಹೆ, ಸೂಚನೆ ನೀಡುತ್ತಿದ್ದರೂ ರೋಗ ಹತೋಟಿಗೆ ಬಂದಿಲ್ಲ.

ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ತಾಲ್ಲೂಕಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಲಾಗಿದೆ.

ಈಗ ಮೆಣಸಿನಕಾಯಿ ಬೆಳೆಗಳು ಹೂವು ಬಿಟ್ಟು, ಕಾಯಿ ಹಿಡಿಯುವ ಹಂತಕ್ಕೆ ಬಂದಿವೆ. ಈ ಹಂತದಲ್ಲಿ ಸಿಡಿರೋಗ ಆವರಿಸಿದೆ. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರೋಗ ಆವರಿಸುತ್ತಿದ್ದು, ರೋಗ ಬಂದ ಗಿಡಗಳು ಸಂಪೂರ್ಣ ಒಣಗುತ್ತಿವೆ. ಇನ್ನು ಮೆಣಸಿನಕಾಯಿ ಪೂರ್ಣ ಪ್ರಮಾಣದಲ್ಲಿ ಬೆಳೆಯದೆ ಗಿಡದಲ್ಲಿಯೇ ಬಾಡುತ್ತಿದ್ದು, ಕೊಳೆಯುವ ಹಂತಕ್ಕೆ ಬಂದಿವೆ. ರೋಗ ಹತೋಟೆಗೆ ರೈತರು ನಾನಾ ಕಸರತ್ತು ನಡೆಸುತ್ತಿದ್ದು, ವಿವಿಧ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ.

ಮೆಣಸಿನಕಾಯಿಗೆ ಬಾಧಿಸುವ ಸಿಡಿರೋಗ ಹಾಗೂ ಬೂದಿರೋಗ ನಿರ್ವಹಣೆಗೆ ತಜ್ಞರು ಕೆಲ ಸಲಹೆಗಳನ್ನು ನೀಡಿದ್ದಾರೆ. ನೀರನ್ನು ಮಿತವಾಗಿ ಬಿಟ್ಟು, ರೋಗ ಆವರಿಸಿದ ಗಿಡಕ್ಕೆ ನೀರು ಬಿಡಬಾರದು. ಒಣಗಿದ ಗಿಡಗಳನ್ನು ಕಿತ್ತುಹಾಕಬೇಕು. ಗಿಡದ ಬುಡಕ್ಕೆ ಕಾರ್ಬನ್ಡೈಜಿಯನ್ 50ಡಬ್ಲ್ಯುಪಿ 2 ಗ್ರಾಂ, ಅಥವಾ ಕಾರ್ಬರನ್‌ ಜತೆಗೆ ಥೈರಾಮ್ 2 ಗ್ರಾಂ, ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 10 ದಿನಗಳಲ್ಲಿ ಎರಡು ಸಲ ಸಿಂಪಡಿಸಬೇಕು. ಬಿತ್ತನೆ ಸಂದರ್ಭದಲ್ಲಿ ಬೀಜೋಪಚಾರ ಮಾಡಬೇಕು. ಬೆಳೆ ನಿರ್ವಹಣೆ ಜತೆಗೆ ಬಿತ್ತನೆ ಮಾಡುವಾಗ ಕೃಷಿ ತಜ್ಞರ ಮಾಹಿತಿ ಅಗತ್ಯವಾಗಿದೆ ಎಂದು ರಾಯಚೂರು ಕೃಷಿ ವಿಜ್ಞಾನಿಗಳ ಕೇಂದ್ರದ ಕೃಷಿ ತಜ್ಞ ಡಾ. ಡಾ..ಜಿ.ಎಸ್.ಯಡಹಳ್ಳಿ ತಿಳಿಸಿದ್ದಾರೆ.

‘ರೋಗ ನಿರ್ವಹಣೆ, ಕ್ರಿಮಿನಾಶಕ ಸಿಂಪಡಣೆ ಬಗ್ಗೆಯೂ ಮಾಹಿತಿ ನೀಡಿದ್ದೇವೆ. ನಾಟಿ ಮಾಡುವಾಗಲೇ ಬೀಜೋಪಚಾರ ಮಾಡಿದರೆ, ರೋಗದ ಹಾವಳಿ ಕಡಿಮೆ ಮಾಡಬಹುದು ಮತ್ತು ಬಿತ್ತನೆ ಮಾಡುವ ಮುನ್ನ 2ಕಿಲೋ ಟ್ರೈಕೋಡರ್ಮಾ ಜೈವಿಕ ಶಿಲಿಂಧ್ರನಾಶಕವನ್ನು 100 ಕೆಜಿ ಕೊಟ್ಟಿಗೆ ಗೊಬ್ಬರದ ಜತೆ ಬೆರೆಸಿ ಪ್ರತಿ ಎಕರೆಗೆ ಹರಡಿ ಮಣ್ಣಿನಲ್ಲಿ ಸೇರಿಸಬೇಕು’ ಎಂದು ರಾಯಚೂರು ಕೃಷಿ ವಿಜ್ಞಾನಿಗಳ ಕೇಂದ್ರದ ಡಾ. ಶ್ರೀವಾಣಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT