ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಸಂಭ್ರಮದೊಂದಿಗೆ ಕ್ರಿಸ್‌ಮಸ್‌ ಆಚರಣೆ

ಜಿಲ್ಲೆಯ ಚರ್ಚ್‌ಗಳಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ
Last Updated 25 ಡಿಸೆಂಬರ್ 2021, 13:31 IST
ಅಕ್ಷರ ಗಾತ್ರ

ರಾಯಚೂರು: ಏಸುವಿನ ಜನ್ಮದಿನದಂದುಕ್ರಿಸ್‌ಮಸ್‌ ಹಬ್ಬವನ್ನು ಜಿಲ್ಲೆಯಾದ್ಯಂತ ಕ್ರೈಸ್ತರೆಲ್ಲರೂ ಸಂಭ್ರಮ, ಸಡಗರದೊಂದಿಗೆ ಆಚರಿಸಿ, ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳ ಮೂಲಕ ಏಸುವಿನ ಸಂದೇಶವನ್ನು ಆಲಿಸಿದರು.

ಚರ್ಚ್‌ಗಳಲ್ಲಿ ಕೇಕ್‌ ಕತ್ತರಿಸಲಾಯಿತು ಹಾಗೂ ಮೆಣದ ದೀಪ ಉರಿಸಿ ಪರಸ್ಪರ ಸಿಹಿ ತಿನ್ನಿಸಿ ‘ಮೇರಿ ಕ್ರಿಸ್‌ಮಸ್‌’ ಎಂದು ಸಂಬೋಧಿಸುತ್ತಾ ಜನ್ಮದಿನದ ಶುಭಾಶಯ ಕೋರಲಾಯಿತು. ರಾಯಚೂರಿನ ಪ್ರಾಚೀನವಾದ ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅನುಯಾಯಿಗಳು ಪಾಲ್ಗೊಂಡಿದ್ದರು. ಅನ್ಯಧರ್ಮೀಯರು ಕೂಡಾ ಭಾಗಿಯಾಗಿ ಕ್ರೈಸ್ತ ಮಿತ್ರರಿಗೆ ಶುಭಾಶಯ ಕೋರುವುದು ಕಂಡುಬಂತು.

ಕ್ರೈಸ್ತರು ಕುಟುಂಬ ಸಮೇತವಾಗಿ ಹೊಸ ಬಟ್ಟೆ ಧರಿಸಿಕೊಂಡು ಕಂಗೊಳಿಸಿದರು. ಎಲ್ಲ ಚರ್ಚ್‌ಗಳಲ್ಲಿಯೂ ಏಸುವಿನ ಸಂದೇಶಗಳು ಅನುರಣಿಸುತ್ತಿರುವುದು ವಿಶೇಷವಾಗಿತ್ತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಾಗಿ ನಿಂತಿದ್ದ ಅನುಯಾಯಿಗಳು ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಂಡು, ತಮ್ಮ ನಿವೇದನೆಗಳನ್ನು ಸಲ್ಲಿಸುತ್ತಿದ್ದರು. ಕಷ್ಟಕಾರ್ಪಣ್ಯ ದೂರ ಮಾಡುವಂತೆ ಏಸುವಿಗೆ ಮೊರೆ ಇಡುವುದು ಸಾಮಾನ್ಯ.

ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ ಸೂಪರಿಂಡೆಂಟ್‌ ರೆವರಂಡ್‌ ಎ. ಸಿಮಿಯನ್‌ ಅವರು ನೆರೆದಿದ್ದ ಜನರಿಗೆ ಯೇಸುಸ್ವಾಮಿ ಸಂದೇಶಗಳನ್ನು ಸಾರಿದರು. ನೆರೆದಿದ್ದ ಭಕ್ತರೆಲ್ಲರೂ ಸಂದೇಶಗಳನ್ನು ಪುನರುಚ್ಚರಿಸಿ ಭಕ್ತಿಯಿಂದ ನಮಿಸಿದರು. ಯೇಸು ಜನ್ಮ ವೃತ್ತಾಂತವನ್ನು ವಿವರಿಸಲಾಯಿತು.

‘ಏಸುಕ್ರಿಸ್ತ ಕ್ರೈಸ್ತರಿಗೆ ಮಾತ್ರ ಹುಟ್ಟಿ ಬಂದಿಲ್ಲ. ಪಾಪದಿಂದ ಮೋಕ್ಷ ಮಾಡಲು ಏಸುಕ್ರಿಸ್ತ ಜನ್ಮ ತಾಳಿದ್ದಾನೆ. ಹಾಗಾಗಿ ನಾವು ಕ್ರಿಸ್ತನ ಆರಾಧನೆ ಮಾಡುತ್ತೇವೆ. ಯಾರಿಗೂ ಒತ್ತಾಯ ಪೂರ್ವಕ ಧರ್ಮಾಚರಣೆಗೆ ಹೇಳುವುದಿಲ್ಲ. ಪ್ರಪಂಚದಲ್ಲಿ ಏಸುಕ್ರಿಸ್ತ ಯಾಕೆ ಬಂದಿದ್ದಾನೆ ಎಂದು ತಿಳಿದುಕೊಳ್ಳಬೇಕು. ಬೈಬಲ್‌ನಲ್ಲಿ ದೇವರು ಸೃಷ್ಟಿಯ ಬಗ್ಗೆ ಹೇಳಲಾಗಿದೆ. ಇದು ಕಟ್ಟುಕಥೆಯಲ್ಲ’ ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಅವರು ಮೆಥೋಡಿಸ್ಟ್‌ ಚರ್ಚ್‌ ಸಮಾರಂಭದಲ್ಲಿ ಭಾಗವಹಿಸಿ, ಶುಭಾಶಯ ಕೋರಿದರು. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಮುಖಂಡರಾದ ರವೀಂದ್ರ ಜಲ್ದಾರ್‌, ಭೀಮಣ್ಣ ಮಂಚಾಲ್‌, ಶಶಿರಾಜ, ಹರೀಶ, ದೇವಣ್ಣ ನಾಯಕ ಮತ್ತಿತರರು ಇದ್ದರು.

ಆಶಾಪುರ ಮಾರ್ಗದಲ್ಲಿರುವ ಅಗಾಪೆ ಚರ್ಚ್‌, ಬಾಲಯೇಸು ಶಿಕ್ಷಣ ಸಂಸ್ಥೆ ಕ್ಯಾಂಪಸ್‌ ಪಕ್ಕದಲ್ಲಿರುವ ಸೇಂಟ್‌ ಮೇರಿ ಚರ್ಚ್‌ನಲ್ಲಿ ಸಂಭ್ರಮ, ಸಡಗರ ಮನೆಮಾಡಿತ್ತು. ಸ್ಟೇಷನ್‌ ರಸ್ತೆಯಲ್ಲಿರುವ ಸೇಂಟ್‌ ಪ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ನಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT