ಗುರುವಾರ , ಡಿಸೆಂಬರ್ 3, 2020
23 °C

ಕ್ಲಾರಿಯೋನೆಟ್‌ ವಾದನಕ್ಕೆ ತಲೆತೂಗಿದ ಸಂಗೀತಾಸಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನವರಾತ್ರಿ ಹಬ್ಬದ ನಿಮಿತ್ತ ‘ಪ್ರಜಾವಾಣಿ’ಯಿಂದ ಆಯೋಜಿಸಿರುವ ‘ಪ್ರಜಾವಾಣಿ ದಸರಾ ಸಂಗೀತೋತ್ಸವ 2020’ ಅಂತರ್ಜಾಲ ತಾಣದಲ್ಲಿ ‘ಪ್ರಜಾವಾಣಿ ಲೈವ್‌’ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಲಾವಿದ ಪಂಡಿತ್‌ ನರಸಿಂಹಲು ವಡವಾಟಿ ಅವರು ಗುರುವಾರ ಸುಶ್ರಾವ್ಯವಾಗಿ ಕ್ಲಾರಿಯೋನೆಟ್‌ ವಾದನ ಮಾಡಿದರು.

ರಾಯಚೂರಿನ ‘ಸ್ವರ ಸಂಗಮ ಸಂಗೀತ ವಿದ್ಯಾಲಯ’ದಲ್ಲಿ ಸಂಗೀತೋತ್ಸವ ನಡೆಯಿತು. 80ನೇ ವಯಸ್ಸಿನಲ್ಲಿಯೂ ಎರಡು ಗಂಟೆಗಳವರೆಗೂ ನಿರರ್ಗಳವಾಗಿ ಕ್ಲಾರಿಯೋನೆಟ್‌ ವಾದನ ಮಾಡಿದರು. ಫೆಸ್‌ಬುಕ್‌ ‘ಪ್ರಜಾವಾಣಿ ಲೈವ್‌’ ಕಾರ್ಯಕ್ರಮಕ್ಕೆ 140 ಕ್ಕೂ ಸಂಗೀತಾಸಕ್ತರು ಸಂಪರ್ಕ ಪಡೆದು ವೀಕ್ಷಿಸಿದರು.

ಅವರ ಸುಪುತ್ರ ವೆಂಕಟೇಶ ವಡವಾಟಿ ಅವರು ಸಹ ಕ್ಲಾರಿಯೋನೆಟ್‌ ವಾದನ ಮಾಡಿದ್ದು ವಿಶೇಷ. ಸುದರ್ಶನ ಅಸ್ಕಿಹಾಳ ಅವರ ತಬಲಾ ಸಾಥ್‌ ಅದ್ಭುತವಾಗಿದ್ದನ್ನು ಮೆಚ್ಚಿಕೊಂಡು ಅನೇಕರು ‘ಕಾಮೆಂಟ್‌’ ಹಾಕಿದ್ದಾರೆ. ಸಚಿನ್‌ ಜೈನ್‌ ಹಾಗೂ ಶ್ರೀನಿವಾಸ ಇನಾಮದಾರ ಅವರು ವಿಡಿಯೊಗ್ರಾಫಿ ಮಾಡಿದರು.

ವಚನಗಳು, ಭಕ್ತಿಗೀತೆಗಳು, ದಾಸರ ಪದಗಳನ್ನು ಕ್ಲಾರಿಯೋನೆಟ್‌ ಮೂಲಕ ನುಡಿಸಿದ್ದನ್ನು ಕೇಳಿದ ಜನರು, ಮೆಚ್ಚುಗೆಯಿಂದ ಪ್ರತಿಕ್ರಿಯೆಗಳನ್ನು ಕಳುಹಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಧಾರಾವಾಹಿ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರು ಸಂಪೂರ್ಣ ಎರಡು ಗಂಟೆ ಕಾರ್ಯಕ್ರಮ ಆಲಿಸಿದ್ದಲ್ಲದೆ ಮೆಚ್ಚುಗೆ ಸಂದೇಶಗಳನ್ನು ಕಳುಹಿಸಿದರು.

‘ಬಹಳ ವರ್ಷಗಳ ನಂತರ ನರಸಿಂಹಲು ವಡವಾಟಿ ಅವರ ಕ್ಲಾರಿಯೋನೆಟ್‌ ಕೇಳುವ ಅವಕಾಶ ಬಂತು. ರಾಯಚೂರಿನವನಾದ ನನಗೆ ಬಹಳ ಅಭಿಮಾನ. ನನಗೆ ಆತ್ಮೀಯರು ಹೌದು..’ ಎಂದು ಪಂಪಯ್ಯಶೆಟ್ಟಿ ಹೊಸೂರು ಪ್ರತಿಕ್ರಿಯೆ ಕಳುಹಿಸಿದ್ದರು.

ಸಂಗೀತದ ಮೂಲಕ ಹಬ್ಬದ ಸಡಗರವನ್ನು ಹೆಚ್ಚಿಸಿದ ‘ಪ್ರಜಾವಾಣಿ’ಗೆ ಧನ್ಯವಾದಗಳು ಎಂದು ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

‘ವಡವಾಟಿ ಸರ್‌ ಅವರು ನುಡಿಸಿದ ಸಿ.ಡಿ. ಒಂದಿತ್ತು ನನ್ನ ಬಳಿ ಸುಮಾರು 25 ವರ್ಷದ ಹಿಂದೆ.. ತೋಡಿ ರಾಗದ್ದು..ಸುಮಾರು ಸಾವಿರ ಸಲ ಕೇಳಿರಬಹುದು. ಈಗ ಅದಕ್ಕೆ ಸ್ಕ್ರ್ಯಾಚಸ್‌ ಬಂತು.. ತೋಡಿ ರಾಗದ ಹುಚ್ಚು ಹಿಡಿಯಿತು ಅದರಿಂದ ನನಗೆ.. ಧನ್ಯವಾದಗಳು ಗುರುಗಳೇ’ ಎಂದು ಟಿ.ಎನ್‌. ಸೀತಾರಾಂ ಅವರು ಕಾಮೆಂಟ್‌ ಹಾಕಿದ್ದು ಸಂಗೀತ ಪ್ರಿಯರೆಲ್ಲರ ಗಮನ ಸೆಳೆಯುವಂತಿತ್ತು.

ಲೈವ್‌ ಆಲಿಸಿದ ಸುಧೀರ್‌ ಪವಾರ, ರಮಾ ಹಿರೇಮಠ ಸೇರಿದಂತೆ ಅನೇಕರು ಕಾರ್ಯಕ್ರಮವು ಅದ್ಭುತವಾಗಿತ್ತು ಎಂದು ಶ್ಲಾಘಿಸಿದರು. ಪ್ರತಿಯೊಂದು ಗಾಯನವನ್ನು ನುಡಿಸುವ ಪೂರ್ವ ಪಂಡಿತ್‌ ನರಸಿಂಹಲು ವಡವಾಟಿ ಅವರು ರಾಗದ ವಿವರ ಹೇಳಿದ್ದಕ್ಕೆ
ಅನೇಕರು ವಿಶೇಷ ಧನ್ಯತಾ ಭಾವ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.