ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮ್ಮಸ್ಸಿನಿಂದ ಶಾಲೆಗಳತ್ತ ಹೆಜ್ಜೆ ಹಾಕಿದ ಮಕ್ಕಳು

ತಳಿರು–ತೋರಣಗಳಿಂದ ಶಾಲೆಗಳ ಅಲಂಕಾರ, ಹಬ್ಬದ ವಾತಾವರಣ ನಿರ್ಮಾಣ: ಮಾರ್ಗಸೂಚಿ ಪಾಲನೆಗೆ ಆದ್ಯತೆ
Last Updated 26 ಅಕ್ಟೋಬರ್ 2021, 2:47 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಸೋಮವಾರ 1 ರಿಂದ 5 ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾದವು. ಮಕ್ಕಳು ಉತ್ಸಾಹದಿಂದಲೇ ಶಾಲೆಗಳಿಗೆ ಆಗಮಿಸಿದರು.

ಸರ್ಕಾರದ ಮಾರ್ಗಸೂಚಿ ಅನ್ವಯ ಶಾಲೆಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮಕ್ಕಳಿಗೆ ಹೂ ನೀಡಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಹಲವು ಶಾಲೆಗಳನ್ನು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಬಹುತೇಕ ಕಡೆ ಶಿಕ್ಷಕರು ಪಾಠ ಮಾಡದೇ ಪಠ್ಯೇತರ ಚಟುವಟಿಕೆ ಹಾಗೂ ಮನೋರಂಜನೆಗೆ ಒತ್ತು ನೀಡಿದರು.

ಎಲ್ಲ ಮಕ್ಕಳು ಮಾಸ್ಕ್ ಧರಿಸಿ ಶಾಲೆಗಳಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಂಡಿದ್ದು ಕಂಡುಬಂತು. ಶಾಲೆ ಆರಂಭಕ್ಕೂ ಮುಂಚೆಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದರು.

ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಪಾಲಕರೊಂದಿಗೆ ಚರ್ಚೆ ನಡೆಸಿ ಒಪ್ಪಿಗೆ ಪತ್ರ ಪಡೆದಿದ್ದರು. ಕೋವಿಡ್ ಕಾರಣ ಬಹುತೇಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಿಕ್ಷಕರು ತಿಳಿಸುತ್ತಾರೆ.

‘ಸರ್ಕಾರದ ಮಾರ್ಗಸೂಚಿ ಪಾಲಿಸಿ ಶಾಲೆ ಆರಂಭಿಸಲಾಗಿದೆ. ಪಾಲಕರಿಂದ ಒಪ್ಪಿಗೆ ಪತ್ರ ಪಡೆಯಲಾಗಿದೆ. ಗೈರಾದ ಮಕ್ಕಳ ಪಾಲಕರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿ ಕಳುಹಿಸಿ ಕೊಡುವಂತೆ ಮನವೊಲಿಸಲಾಗಿದೆ’ ಎಂದು ನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಶ್ಮಿಯ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಂಕರ ತಿಳಿಸಿದರು.

ಗೊಂದಲ: ಮಾರ್ಗಸೂಚಿ ಅನ್ವಯ 50 ವರ್ಷ ಮೇಲ್ಪಟ್ಟ ಶಿಕ್ಷಕರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ 50 ವರ್ಷ ಮೇಲ್ಪಟ್ಟವರಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಅವರು ಶಾಲೆಗಳಿಗೆ ಬರುವುದು ಅನಿವಾರ್ಯತೆ ಎದುರಾಗಿದೆ.

ಈಗಾಗಲೇ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭಿಸಲಾಗಿದ್ದು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 1ಗಂಟೆಯವರೆಗೆ ಮಾತ್ರ ತರಗತಿ ಇದೆ. ನವೆಂಬರ್ 1ರ ನಂತರ ಪ್ರಾಥಮಿಕ ಶಾಲಾ ಮಕ್ಕಳಿಗೂ ಬಿಸಿಯೂಟ ನೀಡಲು ತೀರ್ಮಾನಿಸಲಾಗಿದೆ.

‘ಶಾಲೆ ಆರಂಭವಾದ ಕಾರಣ ಖುಷಿಯಾಗಿದೆ. ಮಕ್ಕಳು ಭಯವಿಲ್ಲದೆ ಉತ್ಸಾಹದಿಂದ ಇದ್ದಾರೆ. ಪಾಲಕರು ಆತಂಕಪಡದೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು’ ಎಂದು ಹಾಶ್ಮಿಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸೌದಾಮಣಿ ತಿಳಿಸಿದರು.

ಸಿಹಿ ಹಂಚಿ ಸ್ವಾಗತ

ಕವಿತಾಳ: ಪಟ್ಟಣ ಸೇರಿ ವಿವಿಧ ಗ್ರಾಮಗಳ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯ ಮಕ್ಕಳು ಸೋಮವಾರ ಭೌತಿಕ ತರಗತಿಗೆ ಸಂಭ್ರಮದಿಂದ ಹಾಜರಾಗಿದ್ದು ಕಂಡುಬಂತು.

ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಚಿಣ್ಣರಿಗೆ ಸಿಹಿ ತಿನಿಸಿ ಸ್ವಾಗತಿಸಲಾಯಿತು.

ಇಲ್ಲಿನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತೆಂಗಿನ ಗರಿ ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಚಾಕೋಲೆಟ್ ನೀಡಿ ಸ್ವಾಗತಿಸಿದರು.

‘1 ರಿಂದ 5 ನೇ ತರಗತಿಯ ಒಟ್ಟು 59 ಮಕ್ಕಳಲ್ಲಿ 25 ಮಕ್ಕಳು ತರಗತಿಗೆ ಹಾಜರಾಗಿದ್ದಾರೆ’ ಎಂದು ಪ್ರಭಾರ ಮುಖ್ಯ ಶಿಕ್ಷಕ ಆಂಜನೇಯ ತಿಳಿಸಿದರು.

ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 152 ಮಕ್ಕಳ ದಾಖಲಾತಿ ಇದ್ದು, 91 ಮಕ್ಕಳು ತರಗತಿಗಳಿಗೆ ಹಾಜರಾಗಿದ್ದರು. ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯ 80 ಮಕ್ಕಳಲ್ಲಿ 50 ಮತ್ತು ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ 132 ರಲ್ಲಿ 85 ಮಕ್ಕಳು ತರಗತಿಗೆ ಹಾಜರಾಗಿದ್ದರು ಎಂದು ಶಿಕ್ಷಕ ಬಸವರಾಜ ಪಲಕನಮರಡಿ ಹೇಳಿದರು.

ಹಿರೇಹಣಿಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಯ ಒಟ್ಟು 177 ಮಕ್ಕಳಲ್ಲಿ 155 ಮಕ್ಕಳು ತರಗತಿಗೆ ಹಾಜರಾಗಿದ್ದರು.

‘ತರಗತಿ ಕೊಠಡಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂ ಹಾಗೂ ಸಹಿ ತಿಂಡಿ ನೀಡಿ ಚಪ್ಪಾಳೆ ತಟ್ಟಿ ಸ್ವಾಗತಿಸಲಾಯಿತು’ ಎಂದು ಪ್ರಭಾರ ಮುಖ್ಯ ಶಿಕ್ಷಕಿ ನಂದಿನಿ ಶ್ರೀಶೈಲ ಹೇಳಿದರು. ಹುಸೇನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿಯ ಒಟ್ಟು 160 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು ಎಂದು ಶಿಕ್ಷಕ ಸೋಮಶೇಖರ ತಿಳಿಸಿದರು.

ಸಮಸ್ಯೆಗಳ ನಡುವೆ ಸ್ವಾಗತ

ಮಸ್ಕಿ: 1 ರಿಂದ 5ನೇ ವಿದ್ಯಾರ್ಥಿಗಳ ಭೌತಿಕ ತರಗತಿಗಳು ಸೋಮವಾರ ಆರಂಭವಾದವು.

ಪಟ್ಟಣದ ಸೋಮನಾಥ ನಗರದ ಶಾಲೆ ಬಳಿ ಪಾಚಿ ನೀರು ನಿಂತಿದ್ದು, ಅದರಲ್ಲಿಯೇ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಇಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಉರ್ದು ಪ್ರಾಥಮಿಕ ಶಾಲೆ ಇದೆ. ವಿದ್ಯಾರ್ಥಿಗಳು ಇದೇ ಪರಿಸರದಲ್ಲಿ ಓದಬೇಕಾದ ಸ್ಥಿತಿ ಇದೆ.

‘1 ರಿಂದ 5ನೇ ವಿದ್ಯಾರ್ಥಿಗಳ ಭೌತಿಕ ತರಗತಿಗಳು ಆರಂಭವಾಗುತ್ತಿವೆ ಎಂದು ಗೊತ್ತಿದ್ದರೂ ಪುರಸಭೆ ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕಡೆ ಗಮನಹರಿಸಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಶಾಲಾ ಆವರಣದಲ್ಲಿ ಮಳೆ ನೀರು ಸಂಗ್ರಹವಾಗದಂತೆ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ಆವರಣದಲ್ಲಿನ ನೀರು ತೆರವು ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

1 ರಿಂದ 5 ನೇ ತರಗತಿಗಳು ಆರಂಭವಾದ ಕಾರಣ ತಹಶೀಲ್ದಾರ್ ಕವಿತಾ ಆರ್. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಲೂನ್‌ ಕಟ್ಟಿ ಸಂಭ್ರಮ

ಶಕ್ತಿನಗರ: 1 ರಿಂದ 5ನೇ ತರಗತಿವರೆಗಿನ ಮಕ್ಕಳು ಸೋಮವಾರ ಖುಷಿಯಿಂದಲೇ ಶಾಲೆಗೆ ಬಂದರು.

ಶಕ್ತಿನಗರದ ದಯಾನಂದ ಆಂಗ್ಲೋ ವೇದಿಕೆಯ(ಡಿಎವಿ ಪಬ್ಲಿಕ್ ಸ್ಕೂಲ್) ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿ ಸಲಾಗಿತ್ತು. ಬಲೂನ್‌ಗಳನ್ನು ಕಟ್ಟಿ ಶಾಲಾ ಪ್ರಾರಂಭೋತ್ಸವವನ್ನು ವಿಶೇಷವಾಗಿ ಹಬ್ಬದಂತೆ ಆಚರಿಸಲಾಯಿತು.

ದೇವಸೂಗೂರು ಮತ್ತು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಕ್ತಿನಗರ, ಡಿ.ಯದ್ಲಾಪುರ, ದೇವಸೂಗೂರು, ಯರಗುಂಟ, ಸಗಮಕುಂಟ, ಕಾಡ್ಲೂರು, ಜೇಗರಕಲ್‌, ಚಿಕ್ಕಸೂಗೂರು ಗ್ರಾಮಗಳ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಹೂವುಗಳನ್ನು ಹಾಕುವ ಮೂಲಕ ಶಿಕ್ಷಕರೆಲ್ಲರೂ ಸ್ವಾಗತಿಸಿಕೊಂಡರು.

ಶಾಲೆಗೆ ಬಂದ ಮಕ್ಕಳ ದೇಹದ ಉಷ್ಣಾಂಶ ಪರೀಕ್ಷಿಸಲಾಯಿತು. ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT