ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳಲಿದೆ: ಬಿ.ಎಸ್.ಯಡಿಯೂರಪ್ಪ ಭವಿಷ್ಯ

Last Updated 28 ಫೆಬ್ರುವರಿ 2019, 13:48 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಗೆಲ್ಲಲೇಬೇಕು. 22 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳ ಕಚ್ಚಾಟದಲ್ಲಿ ಸರ್ಕಾರ ಬೀಳಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.

ನಗರದ ಸಂತೋಷಿ ಹೋಮ್‌ಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಮೋದಿ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಇತಿಹಾಸದಲ್ಲಿ ಮೊದಲಬಾರಿಗೆ 37 ಶಾಸಕರನ್ನು ಹೊಂದಿರುವ ಜೆಡಿಎಸ್‌ ಪಕ್ಷದಿಂದ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, 104 ಶಾಸಕರನ್ನು ಹೊಂದಿರುವ ನಾವು ವಿರೋಧ ಪಕ್ಷದಲ್ಲಿದ್ದೇವೆ. ಗುಮಾಸ್ತನಂತೆ ಕೆಲಸ ಮಾಡುತ್ತಿರುವುದಾಗಿ ಹೇಳಿರುವ ಕುಮಾರಸ್ವಾಮಿ ಸ್ವಾಭಿಮಾನ ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವುದೇಕೆ ಎಂದರು.

ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಬರಗಾಲದಿಂದ ನೀರಿನ ಸಮಸ್ಯೆ ಎದುರಾಗಿದೆ. ದುಡಿಯುವ ಕೈಗಳಿಗೆ ಕೆಲಸವೂ ಇಲ್ಲವಾಗಿದ್ದು, ರಾಜ್ಯದ ಬರ ಪರಸ್ಥಿಯ ಬಗ್ಗೆ ಬಿಜೆಪಿಯಿಂದ ವರದಿ ನೀಡಲಾಗಿದೆ. ಆದರೆ, ಬೇಜವಾಬ್ದಾರಿಯ ಮುಖ್ಯಮಂತ್ರಿ ರಾಜ್ಯದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿ ಎಂಟು ತಿಂಗಳಲ್ಲಿ ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

40 ವರ್ಷಗಳ ನಂತರ ಉಗ್ರವಾದಿಗಳಿಗೆ ಸರಿಯಾದ ಪಾಠ ಕಲಿಸಲಾಗಿದ್ದು, ನರೇಂದ್ರಮೋದಿ ತಂತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಒಬ್ಬಂಟಿಯಾಗಿದ್ದು, ಭಾರತದ ಮುಂದೆ ಮಂಡಿಯೂರುವಂತಾಗಿದೆ ಎಂದು ಶ್ಲಾಘಿಸಿದರು.

ದೇಶವನ್ನು ಸ್ವಚ್ಛಗೊಳಿಸುವ ಸಫಾಯಿ ಕರ್ಮಚಾರಿ ಪಾದ ತೊಳೆದ ಮೋದಿ ಇದುವರೆಗೆ ಯಾರೂ ಮಾಡದ ಕಾರ್ಯವನ್ನು ಮಾಡಿದ್ದಾರೆ. ರೈತರಿಗೆ ಪ್ರತಿವರ್ಷ ₹6 ಸಾವಿರ ನೀಡುತ್ತಿದ್ದಾರೆ. ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ಮೂಲಕ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ವಿವರಿಸಿದರು.

ಲೋಕಸಭೆ ಚುನಾವಣೆಗೆ 7 ವಾರಗಳ ಕಾಲವು ಉಳಿದಿಲ್ಲ. ಮೋದಿ ಒಂದು ದಿನವೂ ವಿಶ್ರಾಂತಿ ಮಾಡಿಲ್ಲ. ಚುನಾವಣೆ ಮುಗಿಯುವವರೆಗೆ ಮನೆ ಸೇರುವುದಿಲ್ಲವೆಂದು ಸಂಕಲ್ಪ ಮಾಡಿದ್ದೇನೆ. ಕಮಲ ಜ್ಯೋತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಪ್ರತಿಯೊಬ್ಬ ಕಾರ್ತಕರ್ತರ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸಲು ಅಮಿತ್ ಶಾ ಸೂಚನೆ ನೀಡಿದ್ದಾರೆ. ಮಾರ್ಚ್ 2ರಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಾವಿರ ಬೈಕುಗಳಲ್ಲಿ ವಿಜಯೋತ್ಸವ ರೀತಿಯಲ್ಲಿ ಪ್ರವಾಸ ಮಾಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಹೇಳಿದ್ದನ್ನು ಮಾಡುತ್ತಿರುವ ಕಾರಣಕ್ಕೆ ನರೇಂದ್ರ ಮೋದಿ ಅವರಿಗೆ ದೇಶದೆಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಈಚೆಗೆ ನಡೆದಿರುವ ಸಮೀಕ್ಷೆಯಲ್ಲಿ ಶೇ 84 ರಷ್ಟು ಜನ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಹೇಳಿದ್ದಾರೆ. ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಲಿ ಎಂದು ಇಷ್ಟೊಂದು ಪ್ರಮಾಣದಲ್ಲಿ ಜನ ಬಯಸಿರುವುದು ದೇಶದ ಇತಿಹಾಸದಲ್ಲಿ ಮೊದಲಬಾರಿ ಆಗಿದೆ ಎಂದು ಹೇಳಿದರು.

ಭಯೋತ್ಪಾದನೆ ಸಂಪೂರ್ಣವಾಗಿ ನೆಲಸಮವಾಗಲು ಮೋದಿ ಗೆಲ್ಲಬೇಕು. ಬಡತನ ಇರಬಾರದೆಂದು ಸಮರ ಸಾರಿದ್ದಾರೆ. ಪಾಕಿಸ್ತಾನದ ಮೇಲಿನ ಕಾರ್ಯಾಚರಣೆ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲ ಪಕ್ಷಗಳು ಮೋದಿ ಅವರನ್ನು ಬೆಂಬಲಿಸಬೇಕು ಎಂದರು.

ದೇಶದಲ್ಲಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳ ಬೂತ ಮಟ್ಟದ ಕಾರ್ಯಕರ್ತರೊಂದಿಗೆ ಮೋದಿ ಅವರು ಮೇರಾಬೂತ್ ಮಜಬೂತ್ ಸಂವಾದ ಕಾರ್ಯಕ್ರಮ ನಡೆಸಿರುವುದು ದಾಖಲೆಯಾಗಿದೆ. ಮೋದಿ ಹಾಗೂ ಅಮಿತ್ ಶಾ ದೇಶದೆಲ್ಲೆಡೆ ಪ್ರವಾಸ ಮಾಡುತ್ತಿದ್ದು, ಕಾರ್ತಕರ್ತರು ಬೂತ್ ಮಟ್ಟದಲ್ಲಿ ಪ್ರವಾಸ ಮಾಡಿ ಬಿಜೆಪಿ ಗೆಲುವಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಾಸಕರಾದ ಡಾ.ಶಿವರಾಜ ಪಾಟೀಲ, ಕೆ.ಶಿವನಗೌಡ ನಾಯಕ, ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮುಖಂಡರಾದ ಎನ್.ಶಂಕರಪ್ಪ, ತಿಪ್ಪರಾಜು ಹವಾಲ್ದಾರ, ಎ.ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಆರ್.ತಿಮ್ಮಯ್ಯ, ಅಶೋಕಗಸ್ತಿ, ದೊಡ್ಡ ಮಲ್ಲೇಶ, ತ್ರಿವಿಕ್ರಮ ಜೋಷಿ, ರಮಾನಂದ ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT