ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ಚಳಿಗೆ ಮುದುಡಿದ ಜನರ ಮೈ, ಮನ!

ಕಾಲುವೆ ಭಾಗದ ರೈತರಿಗೆ ಭತ್ತದ ಕೊಯ್ಲು ಮಾಡಲು ಪೂರಕವಾದ ವಾತಾವರಣ
Last Updated 20 ಡಿಸೆಂಬರ್ 2018, 6:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಮೂರು ದಿನಗಳಿಂದ ತಾಪಮಾನ ಕುಸಿದು ತಂಪು ಗಾಳಿ ಬೀಸುತ್ತಿದೆ. ಇದರಿಂದ ಬೆಳಿಗ್ಗೆ ಮತ್ತು ಸಂಜೆ ಮೈ ನಡುಗಿಸುವ ಚಳಿ ಉಂಟಾಗುತ್ತಿರುವುದರಿಂದ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಜನಸಂಚಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ.

ಡಿಸೆಂಬರ್‌ 17 ರಿಂದ ನಸುಕಿನ ಜಾವದಲ್ಲಿ ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ. ಬೆಳಿಗ್ಗೆ ವಿವಿಧ ಕೆಲಸಕ್ಕಾಗಿ ಹೋಗುವ ಕಾರ್ಮಿಕರು ಚಳಿಯಿಂದಾಗಿ ಸ್ವಲ್ಪ ತಾಪತ್ರಯ ಅನುಭವಿಸುತ್ತಿದ್ದಾರೆ. ಬಡಾವಣೆಗಳಲ್ಲಿ ಯುವಕರು, ಮಕ್ಕಳು ಹಾಗೂ ವಯೋವೃದ್ಧರು ಬೆಂಕಿ ಕಾಯಿಸುತ್ತಾ ಕುಳಿತುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮೂರು ದಿನಗಳ ಹಿಂದೆ ಕನಿಷ್ಠ ತಾಪಮಾನವು 21 ರಷ್ಟಿತ್ತು. ಡಿಸೆಂಬರ್‌ 19 ರಂದು ಕನಿಷ್ಠ ಉಷ್ಣಾಂಶ 16.5 ಕ್ಕೆ ಕುಸಿದಿದೆ. ಹಗಲಿನಲ್ಲಿ ಸೂರ್ಯನ ದರ್ಶನವಾದರೂ ಬಿಸಿಲು ಬಿದ್ದಿರಲಿಲ್ಲ. ಸದಾ ಬಿಸಿಲಿನಿಂದ ಕೂಡಿದ ಈ ಭಾಗದಲ್ಲಿ ಚಳಿ ಬೀಳುತ್ತಿರುವುದರಿಂದ ಜನಾರೋಗ್ಯದಲ್ಲೂ ಏರುಪೇರಾಗಿದೆ. ಚಳಿ, ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ.

'ಹಿಂಗಾರು ಹಂಗಾಮು ಅವಧಿಯಲ್ಲಿ ಬಿತ್ತನೆ ಮಾಡಿರುವ ಜೋಳ, ಗೋಧಿ ಹಾಗೂ ಕಡಲೆಗೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳುಗಳಲ್ಲಿ ಚಳಿಯ ಅಗತ್ಯವಿತ್ತು. ಮಣ್ಣಿನ ತೇವಾಂಶ ಕುಸಿತವಾಗಿದ್ದರಿಂದ ಹಿಂಗಾರು ಬೆಳೆಗಳು ಸಮರ್ಪಕವಾಗಿ ಬೆಳವಣಿಗೆಯಾಗಿಲ್ಲ. ಡಿಸೆಂಬರ್‌ ಮಧ್ಯದಲ್ಲಿ ಬಿದ್ದಿರುವ ಚಳಿಯಿಂದಾಗಿ ಹಿಂಗಾರು ಬೆಳೆಗಳಿಗೆ ಪೂರಕವಾಗಿಲ್ಲ. ಈಗ ಚಳಿ ಹೆಚ್ಚಾಗುವುದರಿಂದ ಬೆಳೆಗಳಲ್ಲಿ ಕೀಟಬಾಧೆ ವೃದ್ಧಿಯಾಗುತ್ತದೆ. ಪ್ರಮುಖವಾಗಿ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಕಂಡು ಕಂಡುಬರುತ್ತದೆ. ಅದರ ಹತೋಟಿಗಾಗಿ ರೈತರು ಸೂಕ್ತ ಮುನ್ನಚ್ಚರಿಕೆ ವಹಿಸಬೇಕಾಗುತ್ತದೆ' ಎನ್ನುವುದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಲಹೆ.

ಕಳೆದ 10 ವರ್ಷಗಳಲ್ಲಿ ಡಿಸೆಂಬರ್‌ ಒಂದು ತಿಂಗಳಿನಲ್ಲಿ ಬದಲಾಗಿರುವ ಹವಾಮಾನವನ್ನು ಹೋಲಿಕೆ ಮಾಡಿದರೆ, 2010 ರಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಹಮಾಮಾನದಲ್ಲಿ ವೈಪರೀತ್ಯ ಉಂಟಾಗಿರುವುದರಿಂದ ಈ ವರ್ಷ ಹಿಂಗಾರಿನಲ್ಲಿ ತಂಪು ಮಾರುತಗಳು ಬರಲೇ ಇಲ್ಲ. ಮುಂಗಾರಿನಲ್ಲಿ ಮಳೆಯ ಕೊರತೆ ಅನುಭವಿಸಿದ್ದ ರಾಯಚೂರು ಜಿಲ್ಲೆಯ ಕೃಷಿ, ಹಿಂಗಾರಿನಲ್ಲಿ ಚಳಿ ಕೊರತೆಗೀಡಾಯಿತು. ಎರಡೂ ಅವಧಿಯಲ್ಲಿ ಕೃಷಿ ಇಳುವರಿ ಮೇಲೆ ವಾತಾವರಣವು ಪೂರಕವಾದ ಪರಿಣಾಮವನ್ನುಂಟು ಮಾಡಿಲ್ಲ ಎನ್ನುವುದು ವಿಜ್ಞಾನಿಗಳ ವಿಶ್ಲೇಷಣೆ.

**

ರಾಯಚೂರು ಜಿಲ್ಲೆಯಲ್ಲಿ ಡಿಸೆಂಬರ್‌ ತಿಂಗಳಿನ ಹವಾಮಾನ ವಿವರ

ವರ್ಷ/ ಗರಿಷ್ಠ/ ಕನಿಷ್ಠ

2017/ 32.3/ 11.9

2016/ 32.2/ 9.2

2015/ 34.0/ 13.2

2014/ 31.8/ 9.8
2013/ 34.8/ 9.4

2012/ 35.0/ 12.1

2011/ 33.3/ 11.1

2010/ 31.8/ 7.3

2009/ 31.4/ 11.3

2008/ 32.6/ 10.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT