ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ಮನೋಭಾವ ಅರಳಿಸಿದ ರಸಪ್ರಶ್ನೆಗಳು

ವಿಭಾಗಮಟ್ಟದ ಸ್ಪರ್ಧೆಯಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗಿ
Last Updated 19 ಜನವರಿ 2019, 13:07 IST
ಅಕ್ಷರ ಗಾತ್ರ

ರಾಯಚೂರು: ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವ ಕುತೂಹಲ ಮತ್ತು ಗಾಢ ಯೋಚನೆಯ ಮುಖಭಾವ ಹೊತ್ತು ಬಂದಿದ್ದ ಮೂರು ಜಿಲ್ಲೆಗಳ ಶಾಲಾ‌ ವಿದ್ಯಾರ್ಥಿಗಳು ಸ್ಪರ್ಧೆಯ ಉದ್ದಕ್ಕೂ ಉತ್ಸಾಹ, ಉಲ್ಲಾಸದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹಸಿರು ವನಸಿರಿಯಿಂದ ಕೂಡಿದ ಸ್ವಚ್ಛ ಹಾಗೂ ಸುಂದರವಾದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದ ಪ್ರೇಕ್ಷಾಗೃಹದಲ್ಲಿ ಈ ವರ್ಷ ಪ್ರಜಾವಾಣಿ ಸ್ಪರ್ಧೆ ಆಯೋಜಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 8.30 ರಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಮತ್ತು ಪ್ರತಿ ಶಾಲೆಯಿಂದ ಒಬ್ಬರು ಶಿಕ್ಷಕರು ಸ್ಪರ್ಧಾ ಸ್ಥಳಕ್ಕೆ ಬಂದು ಸೇರಿದರು.

ಪ್ರತಿ ಶಾಲೆಯಿಂದ ಆರು ವಿದ್ಯಾರ್ಥಿಗಳ ಮೂರು ಗುಂಪುಗಳು ನೋಂದಣಿ ಮಾಡಿಸಿಕೊಂಡು ಸಭಾಂಗಣದಲ್ಲಿ ಆಸೀನರಾದರು. ಬೆಳಿಗ್ಗೆ 10 ಗಂಟೆಗೆ ಪ್ರೇಕ್ಷಾಗೃಹವು ಬಹುತೇಕ ಭರ್ತಿಯಾಯಿತು. ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಾ ಕುಳಿತಿದ್ದರು. ಕ್ವಿಜ್‌ಮಾಸ್ಟರ್‌ ವೇದಿಕೆಗೆ ಬರುತ್ತಿದ್ದಂತೆ ವಾತಾವರಣ ಮತ್ತಷ್ಟು ಗಂಭೀರವಾಯಿತು. ಸ್ಪರ್ಧೆಯನ್ನು ಚೇತೋಹಾರಿ ಮಾಡುವುದಕ್ಕಾಗಿ ಕ್ಯೂರಿಯಾಸಿಟಿ ಸೊಲ್ಯುಷನ್ಸ್‌ ಕ್ವಿಜ್‌ ಮಾಸ್ಟರ್‌ ಮೇಘವಿ ಅವರು ವಿದ್ಯಾರ್ಥಿಗಳಿಂದ ‘ರೇನ್‌ ಕ್ಲ್ಯಾಪಿಂಗ್‌’ ಮಾಡಿಸಿ, ಹೊಸ ಸಂಚಲನ ಮೂಡಿಸಿದರು.

ಒಂದು ಕೈಗೆ ಇನ್ನೊಂದು ಕೈನ ಒಂದು ಬೆರಳಿನಿಂದ ಚೆಪ್ಪಾಳೆ ಆರಂಭಿಸಿ, ಆನಂತರ ಎರಡು ಬೆರಳು, ಮೂರು.. ನಾಲ್ಕು ಹಾಗೂ ಐದು ಬೆರಳುಗಳಿಂದ ಚೆಪ್ಪಾಳೆ ತಟ್ಟಿಸಿದರು. ಇದು ಸ್ಪರ್ಧೆ ಆರಂಭಕ್ಕೆ ಉತ್ತಮ ಮುನ್ನೂಡಿಯಾಯಿತು. ವಿದ್ಯಾರ್ಥಿ ಸಮೂಹ ಸಂತೋಷ, ಸಂಭ್ರಮದಲ್ಲಿ ಮುಳುಗಿತು. 21 ಪ್ರಶ್ನೆಗಳ ಲಿಖಿತ ಉತ್ತರ ಸುತ್ತು ಆರಂಭಿಸಿದಾಗ, ವಿದ್ಯಾರ್ಥಿ ಸಮೂಹವು 45 ನಿಮಿಷಗಳ ಕಾಲ ತಾವು ಓದಿರುವುದನ್ನು ಒರೆಗಲ್ಲಿಗೆ ಹಚ್ಚಿಕೊಂಡು ಉತ್ತರ ಬರೆದರು.

ಬಹಳಷ್ಟು ಪ್ರಶ್ನೆಗಳು ಸರಳವಾಗಿದ್ದವು. ಆದರೆ, ಗೊಂದಲ ಮೂಡಿಸುವಂತಿದ್ದವು. ತಾರ್ಕಿಕವಾಗಿ ಯೋಚಿಸಿದರೆ ಮಾತ್ರ ಉತ್ತರ ಹೊಳೆಯುತ್ತಿತ್ತು. ಪ್ರಶ್ನೆಯಲ್ಲೇ ಸುಳಿವು ಕೂಡಾ ಇದೆ ಎಂಬುದನ್ನು ಕ್ವಿಜ್‌ ಮಾಸ್ಟರ್‌ ಹೇಳುತ್ತಿದ್ದರಿಂದ ವಿದ್ಯಾರ್ಥಿ ಸಮೂಹ ತದೇಕಚಿತ್ತದಿಂದ ಪ್ರಶ್ನೆಗಳನ್ನು ಕೇಳಿಸಿಕೊಂಡು, ಮನನ ಮಾಡಿಕೊಂಡು ಸರಿಯಾದ ಉತ್ತರ ಬರೆಯುವುದಕ್ಕೆ ಪ್ರಯತ್ನಿಸಿದರು.

ಮೊದಲ ಸುತ್ತಿನಲ್ಲಿ ಕೇಳಲಾದ ಮೊದಲ ಪ್ರಶ್ನೆಯು ರಾಯಚೂರಿಗೆ ಸಂಬಂಧಿಸಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಮುಖ ಅರಳಿಸಿದರು. ಎಲ್ಲರ ಉತ್ಸಾಹ ಇಮ್ಮಡಿಯಾಯಿತು. ‘ರಾಜ ನಗರ ಎಂದು ಯಾವ ನಗರವನ್ನು ಕರೆಯುತ್ತಿದ್ದರು. ಅಲ್ಲಿರುವ ಬಲವಾದ ಕೋಟೆ ಮತ್ತು ಅತ್ಯಂತ ಫಲವತ್ತಾದ ಭೂಮಿ ಪಡೆಯಲು ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ಅರಸರು 200 ವರ್ಷಗಳವರೆಗೆ ಹೋರಾಡಿದರು’ ಎನ್ನುವ ಪ್ರಶ್ನೆ ಅದು.

ಪ್ರಶ್ನೆಗಳನ್ನು ಪರಧೆಯಲ್ಲಿಯೂ ಪ್ರದರ್ಶಿಸಲಾಗಿತ್ತು ಮತ್ತು ಕ್ವಿಜ್‌ ಮಾಸ್ಟರ್‌ ಅದನ್ನು ಓದಿ ಹೇಳುತ್ತಿದ್ದರು. ಕಠಿಣ ಪ್ರಶ್ನೆಗಳಿಗೆ ಮಾತ್ರ ಸುಳಿವು ನೀಡಲಾಯಿತು. ಕೆಲವು ಪ್ರಶ್ನೆಗಳು ವಿದ್ಯಾರ್ಥಿಗಳನ್ನು ನಕ್ಕು ನಲಿಯುವಂತೆ ಮಾಡಿತು. ‘ರಾಜ್ಯದಲ್ಲಿ ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಂಡ್ಯದಲ್ಲಿ ನಡೆದ ಸಭೆಯೊಂದರಲ್ಲಿ ಒಬ್ಬ ವ್ಯಕ್ತಿ ಎದ್ದು ನಿಂತು ‘ಏ ಬುಡ್ಲಾ ನಿಂದ್ ಸಾಕು...’ ಎಂದು ಹೇಳಿ, ಆನಂತರ ಮಾತು ಮುಂದುವರಿಸಿದ್ದರು. ಇವರು ತುಂಬಾ ಜನಪ್ರಿಯರಾಗಿದ್ದರು. ಆ ವ್ಯಕ್ತಿ ಯಾರು?’ ಎಂದು ಕೇಳಿದ ಪ್ರಶ್ನೆಯು ನಗುವುದಕ್ಕೆ ಕಾರಣವಾಯಿತು. ಬಹುತೇಕ ವಿದ್ಯಾರ್ಥಿಗಳು ಈ ಪ್ರಶ್ನೆಗೆ ಸರಿಯಾದ ಉತ್ತರ ‘ರೆಬೆಲ್‌ಸ್ಟಾರ್‌ ಅಂಬರೀಶ್‌’ ಎಂದು ಬರೆದಿದ್ದರು.

ಕೆಲ ಪ್ರಶ್ನೆಗಳ ಪ್ರವಾಹವನ್ನು ಅರ್ಥೈಸಿಕೊಳ್ಳಲಾಗದೆ ಕೆಲವರು ಮೌನ ವಹಿಸಿದ್ದರು. ಈ ನಡುವೆ ಮುದನೀಡುವ ಪ್ರಶ್ನೆಯೊಂದು ಜನಪದರನ್ನು ನೆನಪಿಸಿಕೊಳ್ಳುವಂತೆ ಮಾಡಿತು. ಬಹುತೇಕ ವಿದ್ಯಾರ್ಥಿಗಳು ಇದಕ್ಕೆ ತಪ್ಪು ಉತ್ತರ ಬರೆದಿದ್ದರು. ಪ್ರಶ್ನೆಯಲ್ಲೇ ಉತ್ತರವೂ ಇತ್ತು. ಆದರೂ ಹೊಳೆದಿರಲಿಲ್ಲ.

‘ಆ ಕಲ್ಲ ಈ ಕಲ್‌ ಹಚ್ಚ ಹಳದಿ ಕಲ್ಲ ಇಳಕಲ್‌. ಅದರ ಮುಂದಿನ ಕಲ್ಲ.....’ ಇದನ್ನು ಪೂರ್ತಿಗೊಳಿಸಿ. ಇದು ರಾಯಚೂರಿನ ಒಂದು ಪ್ರಮುಖ ಪಟ್ಟಣದ ಹೆಸರು ಇದು ಎಂದು ಕೇಳಲಾಯಿತು. ಕೆಲವು ವಿದ್ಯಾರ್ಥಿಗಳು ಮಸರಕಲ್‌, ಕಲ್ಮಲ್‌, ನವಿಲಕಲ್‌ ಎಂದು ಗ್ರಾಮಗಳ ಹೆಸರು ಬರೆದಿದ್ದರು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ‘ಮುದಗಲ್‌’ ಎಂದು ಸರಿಯಾದ ಉತ್ತರ ಬರೆದಿದ್ದರು.

ಉಕ್ಕಿದ ಉತ್ಸಾಹ: ಎರಡನೇ ಸುತ್ತಿಗೆ ಆಯ್ಕೆಯಾದ ಆರು ತಂಡಗಳ ವಿದ್ಯಾರ್ಥಿಗಳು ಪ್ರತ್ಯೇಕ ತಾಲ್ಲೂಕುಗಳಿಂದ ಬಂದವರಾಗಿದ್ದರು. ಈ ಹಿಂದೆ ನಡೆದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಯಚೂರು ವಿದ್ಯಾರ್ಥಿಗಳದ್ದೆ ಮೇಲುಗೈ ಎದ್ದು ಕಾಣುತ್ತಿತ್ತು. ಈ ವರ್ಷ ರಾಯಚೂರು ನಗರದ ಎರಡು ತಂಡಗಳು ಮಾತ್ರ ಎರಡನೇ ಸುತ್ತಿಗೆ ಆಯ್ಕೆಯಾದವು. ಮಾನ್ವಿ, ದೇವದುರ್ಗ, ಸಿಂಧನೂರು, ಬಳ್ಳಾರಿ ತಾಲ್ಲೂಕುಗಳಿಂದ ತಲಾ ಒಂದು ತಂಡವು ಮೊದಲ ಸುತ್ತಿನಲ್ಲಿ ವಿಜಯ ಸಾಧಿಸಿದ್ದು ಗಮನಾರ್ಹ.

ಎರಡನೇ ಸುತ್ತಿಗೆ ಆಯ್ಕೆಯಾದ ತಂಡಕ್ಕೆ ಐದು ಹಂತದಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು. ನೇರ ಪ್ರಶ್ನೆಗಳು, ಚಿತ್ರಗಳನ್ನು ಆಧರಿಸಿದ ಪ್ರಶ್ನೆಗಳು, ಚಿತ್ರಗಳನ್ನು ಹೊಂದಿಸಿ ಉತ್ತರ ಹೇಳುವ ಪ್ರಶ್ನೆಗಳಿದ್ದವು. ಬಳ್ಳಾರಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ನಾಲ್ಕು ಹಂತದವರೆಗೂ ಪ್ರಥಮ ಸ್ಥಾನದಲ್ಲಿದ್ದರು. ಆದರೆ, ಕೊನೆಯ ಸುತ್ತಿನಲ್ಲಿ ಸಿಂಧನೂರು ಎಂಡಿಎನ್‌ ಫ್ಯೂಚರ್‌ ಶಾಲೆಯ ವಿದ್ಯಾರ್ಥಿಗಳು, ಕ್ವಿಜ್‌ ಮಾಸ್ಟರ್‌ ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ಬಜರ್‌ನ್ನು ಒತ್ತಿ ಉತ್ತರಗಳನ್ನು ನೀಡಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಪ್ರತಿ ಹಂತದಲ್ಲೂ ಕುತೂಹಲ, ಉತ್ಸಾಹ ಎದ್ದು ಕಾಣುತ್ತಿತ್ತು. ಸ್ಪರ್ಧಾ ತಂಡಗಳು ಉತ್ತರಿಸದ ಪ್ರಶ್ನೆಗಳಿಗೆ ಸಭೆಯಲ್ಲಿದ್ದವರಿಗೆ ಅದೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ‘ನಾ ಮೊದಲು’ ಎಂದು ಬಹಳಷ್ಟು ವಿದ್ಯಾರ್ಥಿಗಳು ಕೈ ಎತ್ತಿ ಪೈಪೋಟಿ ನಡೆಸಿದರು. ಅಲ್ಬರ್ಟ್‌ ಐನ್‌ಸ್ಟಿನ್‌ ಅವರೊಂದಿಗೆ ಪ್ರಧಾನಮಂತ್ರಿ ಜವಾಹರ ಲಾಲ್‌ ನೆಹರು ಅವರು ಸಮಾಲೋಚನೆ ಮಾಡುತ್ತಿರುವ ಕಪ್ಪು ಬಿಳುಪು ಚಿತ್ರವೊಂದನ್ನು ಪರಧೆಯಲ್ಲಿ ಪ್ರದರ್ಶಿಸಲಾಯಿತು. ಈ ಚಿತ್ರದಲ್ಲಿ ಐನ್‌ಸ್ಟಿನ್‌ ಅವರೊಂದಿಗೆ ಇರುವ ಭಾರತೀಯ ಪ್ರಭಾವಿ ವ್ಯಕ್ತಿ ಯಾರು ಎಂದು ಕೇಳಿದ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರ ಬರಲಿಲ್ಲ. ಸಭಾಂಗಣದಲ್ಲಿದ್ದ ನೀರಮಾನ್ವಿ ಶಾಲೆಯ ವಿದ್ಯಾರ್ಥಿ ಜನಾರ್ಧನ ಅವರು ಸರಿಯಾಗಿ ಉತ್ತರಿಸಿ ಬಹುಮಾನ ಪಡೆದರು. ಎಲ್ಲರೂ ಚಪ್ಪಾಳೆ ಹಾಕಿ ಅಭಿನಂದಿಸಿದರು.

ಉದ್ಘಾಟನೆ: ಬೆಳಿಗ್ಗೆಯಿಂದ ನಡೆದ ರಸಪ್ರಶ್ನೆ ಸ್ಪರ್ಧೆಯನ್ನು ಇಬ್ಬರು ವಿದ್ಯಾರ್ಥಿಗಳ ಮೂಲಕವೇ ಉದ್ಘಾಟಿಸಿದ್ದು ವಿಶೇಷವಾಗಿತ್ತು. ರಾಯಚೂರಿನ ಚಂದ್ರಬಂಡಾ ಪ್ರೌಢಶಾಲೆಯ ಮಹೇಂದ್ರಕುಮಾರ್‌ ಮತ್ತು ಆದರ್ಶ ವಿದ್ಯಾಲಯದ ಜಿ. ಭರತ್‌ ಅವರು ಈ ಅವಕಾಶವನ್ನು ಪಡೆದರು. ರೇಸ್‌ ಶಾಲಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಮೋಹನ್‌ ರೆಡ್ಡಿ ಹಾಗೂ ಜಾನ್‌ ಮಿಲ್ಟನ್‌ ಶಾಲೆಯ ಮುಖ್ಯಸ್ಥ ರಾಮಾಂಜಿನೇಯಲು ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ಪರ್ಧೆ ಅಂತಿಮಗೊಂಡ ಬಳಿಕಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹6 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ₹4 ಸಾವಿರ ನಗದು ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ₹2 ಸಾವಿರ ನಗದು ಬಹುಮಾನ ಮತ್ತು ಎಲ್ಲರಿಗೂ ಪ್ರಮಾಪತ್ರಗಳನ್ನು ಗಣ್ಯರು ವಿತರಿಸಿದರು.

‘ದೀಕ್ಷಾ ನೆಟ್‌ವರ್ಕ್‌ ಸಂಸ್ಥೆ’ ಹಾಗೂ ಕೆನರಾ ಬ್ಯಾಂಕ್‌ ಸಹಭಾಗಿತ್ವದಲ್ಲಿ ಈ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT