ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷದಿಂದ ಮಾದಿಗರ ಕಡೆಗಣನೆ

ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭದಲ್ಲಿ ಡಿಸಿಎಂ ಕಾರಜೋಳ ಟೀಕೆ
Last Updated 23 ಫೆಬ್ರುವರಿ 2020, 13:02 IST
ಅಕ್ಷರ ಗಾತ್ರ

ಸಿಂಧನೂರು: ಕಾಂಗ್ರೆಸ್ ಪಕ್ಷ 70 ವರ್ಷಗಳಿಂದ ಪರಿಶಿಷ್ಟರನ್ನು ಮತಬ್ಯಾಂಕ್ ಮಾಡಿಕೊಂಡು ಆಡಳಿತ ನಡೆಸಿದೆ. ಆದರೆ ಸಮುದಾಯದ ಜನರ ಅಭಿವೃದ್ದಿಗೆ ಕಿಂಚಿತ್ತೂ ಕಾಳಜಿ ವಹಿಸಲಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದರು.

ಇಲ್ಲಿನ ಸತ್ಯಗಾರ್ಡನ್‍ನಲ್ಲಿ ಮಾದಿಗ ನೌಕರ ಕ್ಷೇಮಾಭಿವೃದ್ದಿ ಸಂಘ ಹಾಗೂ ಮಾದಿಗ ಸಮಾಜ ತಾಲ್ಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಂದೆ-ತಾಯಿಯನ್ನು ಮರೆತು ಇಂದಿರಾಗಾಂಧಿ ಅವರನ್ನು ತಾಯಿಯೆಂದು ಕರೆಯುತ್ತಾ ಬಂದಿದ್ದೇವೆ. ಆದರೆ ಒಮ್ಮೆಯೂ ಹಾಲು ಕುಡಿಸದೆ ಮಲತಾಯಿಯಂತೆ ಕಡೆಗಣಿಸಿ ವ್ಯವಸ್ಥಿತ ಶೋಷಣೆ ಮಾಡಿಕೊಂಡು ಬರುತ್ತಿದೆ. ಮಾದರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಮತ್ತಿತರ ದಲಿತ ಶರಣರ ಪರಂಪರೆಯನ್ನು ಹೊಂದಿದ ಮಾದಿಗ ಸಮುದಾಯ ಇತರ ಸಮುದಾಯಗಳೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಮುಖ್ಯಪ್ರವಾಹದಲ್ಲಿ ಬೆರೆಯಬೇಕಾದ ಅವಶ್ಯಕತೆ ಇದೆ ಎಂದರು.

ಮಾದಿಗ ಸಮುದಾಯವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರತಿಯೊಂದು ಗ್ರಾಮದಲ್ಲಿ ತಳವೂರಿದೆ. ಅಂಬೇಡ್ಕರ್ ಅವರು ಹೇಳಿದಂತೆ ಮತದ ಮಹತ್ವವನ್ನು ಅರ್ಥ ಮಾಡಿಕೊಂಡರೆ ದೇಶವನ್ನೇ ಆಳುವ ಶಕ್ತಿ ಸಮಾಜಕ್ಕೆ ಸಿಗುವುದರಲ್ಲಿ ಅನುಮಾನವಿಲ್ಲ. ಭಾರತೀಯ ಜನತಾ ಪಾರ್ಟಿ ಮಾದಿಗ ಸಮಾಜವನ್ನು ಗೌರವದಿಂದ ಕಂಡಿದೆ. ಸ್ಥಾನಮಾನ ನೀಡಿದೆ. ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ 13 ಜನ ಆಯ್ಕೆಯಾಗುವುದಕ್ಕೆ ಮಾದಿಗ ಸಮಾಜದ ಪಾತ್ರ ಬಹುದೊಡ್ಡದಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಸಮಾಜದ ಪ್ರಗತಿ ಸಾಧ್ಯವಿದೆ. ಸಿಂಧನೂರು ತಾಲ್ಲೂಕಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹3 ಕೋಟಿ ಮತ್ತು ಸರ್ಕಾರದ ಜಾಗ ಖರೀದಿಸಲು ಸಹ ತಾವೇ ಹಣ ಒದಗಿಸುವುದಾಗಿ ಗೋವಿಂದ ಕಾರಜೋಳ ಭರವಸೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯದಲ್ಲಿ ಶೇ 48 ರಷ್ಟು ಪರಿಶಿಷ್ಟ ಜನಾಂಗದ ಸಂಖ್ಯೆಯಿದ್ದರೂ ರಾಜ್ಯದ ಸಂಪತ್ತಿನಲ್ಲಿ ಸಿಗಬೇಕಾದ ಪಾಲು ಸಿಕ್ಕಿಲ್ಲ. ಸಹಸ್ರಾರು ವರ್ಷಗಳಿಂದ ಸಂಕಟ ಅನುಭವಿಸಿರುವ ಈ ಸಮಾಜಕ್ಕೆ ಮೀಸಲಾತಿ ಅತ್ಯವಶ್ಯಕ ಎಂದು ಹೇಳಿದರು.

ಶಾಸಕರಾದ ವೆಂಕಟರಾವ್ ನಾಡಗೌಡ, ಬಸವರಾಜ ದಢೇಸುಗೂರು, ಮಾಜಿ ಶಾಸಕ ಪ್ರತಾಪಗೌಡ ‍ಪಾಟೀಲ ಹಾಗೂ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿದರು. ಚಿತ್ರದುರ್ಗದ ಪ್ರಗತಿಪರ ಚಿಂತಕ ಸಿ.ಕೆ.ಮಹೇಶ ವಿಶೇಷ ಉಪನ್ಯಾಸ ನೀಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹10 ನಗದು ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಸನ್ಮಾನಿಸಲಾಯಿತು.

ಮಾದಿಗ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಹಲಗಿ ಅಧ್ಯಕ್ಷತೆ ವಹಿಸಿದ್ದರು. ಷಡಕ್ಷರಿ ಮುನಿ ದೇಶಿಕೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು.

ಮುನಿರಾಬಾದ್ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಸದಸ್ಯರಾದ ಶಿವನಗೌಡ ಗೊರೇಬಾಳ, ದುರುಗಪ್ಪ ಗುಡಗಲದಿನ್ನಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಮುಖಂಡರಾದ ವೀರಭದ್ರಪ್ಪ ಮಲ್ಲಾಪುರ, ಹನುಮಂತಪ್ಪ ಮುದ್ದಾಪುರ, ಶೇಖರಪ್ಪ ಗಿಣಿವಾರ, ಎಚ್.ಎನ್.ಬಡಿಗೇರ್, ಆರ್.ಅಂಬ್ರೂಸ್, ಎಂ.ಭಾಸ್ಕರ್, ರಾಮಣ್ಣ ಉದ್ಬಾಳ, ಮಧ್ವರಾಜ್ ಆಚಾರ್, ಹುಚ್ಚಮ್ಮ ಜಾನಪ್ಪ, ನಗರಸಭೆ ಸಿಇಓ ದುರುಗಪ್ಪ ಹಸಮಕಲ್, ಭೂಮಾಪನಾ ಅಧಿಕಾರಿ ಶಾಂತಕುಮಾರ ಅಗಸಬಾಳ, ಯಮನಪ್ಪ ಗಿರಿಜಾಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಲಿಂಗಪ್ಪ ಡಿ, ಗ್ರಂಥಪಾಲಕ ಯಲ್ಲಪ್ಪ ಗೋನವಾರ, ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಪ್ಪ, ಕಾನೂನು ಸಲಹೆಗಾರ ಶೇಖರಪ್ಪ ಧುಮತಿ ವಕೀಲ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಿಂಗ ಇಂಗಳದಾಳ, ತಾಲ್ಲೂಕು ಪಂಚಾಯಿತಿ ಪ್ರಭಾರ ಸಹಾಯಕ ನಿರ್ದೇಶಕ ಯಂಕಪ್ಪ ಕುರುಕುಂದಾ, ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ರಾಮಣ್ಣ ಇದ್ದರು. ದುರುಗಪ್ಪ ಗುಡದೂರು ಹಾಗೂ ಶಂಕರ ಹೊಸಮನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT