ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಬೆಳೆ ಹಾನಿ

Last Updated 13 ಅಕ್ಟೋಬರ್ 2020, 17:10 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿವಿಧ ಬೆಳೆಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಜನ ಜೀವನ ಅಸ್ತವ್ಯವಸ್ತಗೊಂಡಿದೆ.

ಶನಿವಾರ ರಾತ್ರಿ ಭಾರೀ ಗಾಳಿಯೊಂದಿಗೆ ಆರಂಭವಾದ ಮಳೆ ತಡರಾತ್ರಿ ಮಳೆಯ ಜೊತೆಗೆ ಆಲೆಕಲ್ಲು ಸುರಿದಿದೆ. ಭಾನುವಾರದಿಂದ ಮಂಗಳವಾರ ಸಂಜೆವರೆಗೂ ದೇವದುರ್ಗ ಹೋಬಳಿ ಸೇರಿದಂತೆ ಗಬ್ಬೂರು, ಅರಕೇರಾ ಮತ್ತು ಜಾಲಹಳ್ಳಿ ಹೋಬಳಿಯಲ್ಲಿ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಹತ್ತಿ, ಮೆಣಸಿನಕಾಯಿ ಸೇರಿದಂತೆ ಇತರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ರೈತರ ಅತಂಕಕ್ಕೆ ಒಳಗಾಗಿದ್ದಾರೆ.

ಮೂರು ದಿನಗಳಿಂದ ಮೋಡ ಕವಿದಿರುವುದರಿಂದ ಸೂರ್ಯನ ದರ್ಶನ ಇಲ್ಲದಂತಾಗಿದೆ. ಬಿಡವು ಇಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಸುಂಕೇಶ್ವರಹಾಳದಿಂದ ಹಿರೇಬೂದೂರು ಮಾರ್ಗವಾಗಿ ಗೂಗಲ್ ಗ್ರಾಮದ ರಸ್ತೆ ಮತ್ತು ದೇವದುರ್ಗದಿಂದ ಕೊಪ್ಪರ ಮಾರ್ಗವಾಗಿ ಗೂಗಲ್ ರಸ್ತೆ, ಮುಷ್ಟೂರದಿಂದ ಅರಕೇರಾ ರಸ್ತೆ, ಕಮದಾಳ ರಸ್ತೆ, ಯಾಟಗಲ್ ರಸ್ತೆ ಹಾಗೂ ಇತರ ಕೆಲವು ಗ್ರಾಮಗಳ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಈ ಮೊದಲೇ ಸಂಚಾರಕ್ಕೆ ತೊಂದರೆಯಾಗಿದ್ದ ಕೊಪ್ಪರ- ಗೂಗಲ್ ಮತ್ತು ಸುಂಕೇಶ್ವರಹಾಳ-ಗೂಗಲ್ ರಸ್ತೆ ಧಾರಾಕಾರ ಮಳೆಯಿಂದಾಗಿ ಮತ್ತಷ್ಟು ಹದಗೆಟ್ಟಿರುವುದರಿಂದ ನಡೆದುಕೊಂಡು ಹೋಗಲು ಸಹ ಬಾರದಂಥಹ ಸ್ಥಿತಿ ನಿರ್ಮಾಣವಾಗಿದೆ.

ಪ್ರಾಥಮಿಕ ವರದಿ ಪ್ರಕಾರ ಮಳೆಗೆ 69 ಮನೆಗಳಿಗೆ ಹಾನಿ ಸಂಭವಿಸಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ವತಿಯಿಂದ ಕೈಗೊಂಡಿರುವ ಬೆಳೆ ಹಾನಿ ಕುರಿತ ಜಂಟಿ ಸಮೀಕ್ಷೆಯಲ್ಲಿ 450 ಎಕರೆ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ವಂದಲಿ ಗ್ರಾಮದಲ್ಲಿ 8 ಕುರಿಗಳು ಮೃತಪಟ್ಟಿವೆ. ಮಳೆಯಿಂದ ಉಂಟಾದ ಎಲ್ಲಾ ಹಾನಿಯ ಕುರಿತು ಸಮೀಕ್ಷೆ ಕಾರ್ಯ ಮಾಡಲಾಗುವುದು ಎಂದು ತಹಶೀಲ್ದಾರ್ ಮಧುರಾಜ ಯಾಳಗಿ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಈಗಾಗಲೇ ತಾಲ್ಲೂಕು ಆಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT