ಸಂವಿಧಾನ ಪ್ರತಿ ಸುಟ್ಟವರ ಕ್ರಮಕ್ಕೆ ಒತ್ತಾಯ

7
ಸಂವಿಧಾನ ಉಳಿಸಿ ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನಾ ರ್‍ಯಾಲಿ

ಸಂವಿಧಾನ ಪ್ರತಿ ಸುಟ್ಟವರ ಕ್ರಮಕ್ಕೆ ಒತ್ತಾಯ

Published:
Updated:

ರಾಯಚೂರು: ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಂವಿಧಾನ ಉಳಿಸಿ ಕರ್ನಾಟಕ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕುವ ಮೂಲಕ ದೇಶಕ್ಕೆ ಅವಮಾನ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣ ದಾಖಲಿಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಈ ಹಕ್ಕನ್ನು ಕಲ್ಪಿಸಿರುವ ಸಂವಿಧಾನವನ್ನು ಸುಟ್ಟು ಹಾಕುವ ಮೂಲಕ ಜಾತಿ, ಧರ್ಮಾಂಧತೆಯ ವಿಕೃತಿ ತೋರಿಸಲಾಗಿದೆ. ಈ ಘಟನೆಯ ಹಿಂದೆ ಮನುವಾದಿ ಜಾತಿಯ ಮನಸ್ಸಿದೆ ಎಂದು ದೂರಿದರು.

ಅರಕ್ಷಣೆ ವಿರೋಧಿ ಸಂಘಟನೆ, ಭೂಮಿಹಾರ್ ಬ್ರಾಹ್ಮಣ ಏಕ್ತಾ ಮಂಚ್‌, ಆಜಾದ್‌ ಸೇನಾ ಸಂಘಟನೆಗಳು ಸಂವಿಧಾನದ ಪ್ರತಿಯನ್ನು ಸುಡುವ ಮೂಲಕ ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಕೃತ ಮನಸುಗಳು ಸಂವಿಧಾನ ಬದ್ಧ ಮೀಸಲಾತಿ ವಿರೋಧಿಸುತ್ತಿವೆ. ಸಂವಿಧಾನ ಬಲಾವಣೆಯ ಮಾತುಗಳನ್ನಾಡಲಾಗುತ್ತಿದ್ದು, ಇದರ ಹಿಂದೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಬೆಂಬಲಿಸುವ ಸಂಘಟನೆಗಳು ಇವೆ ಎಂದರು.

ಸಂವಿಧಾನ ಪ್ರತಿಯನ್ನು ಸುಟ್ಟಿರುವ ದುಷ್ಕರ್ಮಿಗಳ ವಿರುದ್ಧ ದೇಶದ್ರೋಹ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ರಾಘವೇಂದ್ರ ಕುಷ್ಟಗಿ, ಲಕ್ಷ್ಮಣ ಮಂಡಲಗೇರಾ, ಮರಿಲಿಂಗಪ್ಪ ಕೋಳೂರು, ಖಾಜಾ ಅಸ್ಲಂ, ಹನುಮಂತಪ್ಪ ಕಾಕರಗಲ್, ಪರಪ್ಪ ನಾಗೋಲಿ, ಆಂಜನೇಯ, ಬಸವರಾಜ, ಶೇಖ ಅಹ್ಮದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !