ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತೂವರ್ಜಿಯಿಂದ ರಚನೆಯಾದ ಸಂವಿಧಾನ: ಪ್ರಸನ್ನಕುಮಾರ್‌

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ
Last Updated 26 ನವೆಂಬರ್ 2022, 12:28 IST
ಅಕ್ಷರ ಗಾತ್ರ

ರಾಯಚೂರು: ಸಂವಿಧಾನವನ್ನು ಅತ್ಯಂತ ಮುತುವರ್ಜಿಯಿಂದ ರಚಿಸಿಕೊಟ್ಟಿದ್ದರ ಫಲವಾಗಿ ನಾವೆಲ್ಲರೂ ಶಾಂತಿ ಹಾಗೂ ಸಮನ್ವಯತೆಯ ನಾಗರಿಕ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ. ಅಂತಹ ಪವಿತ್ರ ಸಂವಿಧಾನವನ್ನು ಅರಿತು ಗೌರವಿಸಿ ಪಾಲನೆ ಮಾಡುವುದು ಆದ್ಯ ಕರ್ತವ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನಕುಮಾರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಸಂವಿಧಾನವು ಪ್ರಪಂಚದಲ್ಲಿ ಲಿಖಿತ ಸಂವಿಧಾನಗಳಲ್ಲಿ ಒಂದು. ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಅತ್ಯಂತ ಕ್ರಿಯಶೀಲವಾದ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವ ಹೊಂದಾಣಿಕೆಗೆ ಅವಕಾಶ ಕಲ್ಪಿಸುವ ಸಂವಿಧಾನವನ್ನು ರಚಿಸಿ ಕೊಟ್ಟಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆದಿಯಾಗಿ ಇಡೀ ಸಂವಿಧಾನ ರಚನಾ ಸಭೆಯು ಭಾರತದ ಭವಿಷ್ಯವನ್ನು ನಿರ್ಧರಿಸುವ ಮಣ್ಣಿನ ಶ್ರೇಷ್ಠ ಕಾಯ್ದೆ ಇದಾಗಿದೆ ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ರವರು ಮಾತನಾಡಿ, ಸುಮಾರು 2 ವರ್ಷ 11 ತಿಂಗಳು 18 ದಿನಗಳ ಅವಧಿಯಲ್ಲಿ ನಿರ್ದಿಷ್ಟ ಗುರಿ ಮತ್ತು ಧ್ಯೆಯೋದ್ದೇಶಗಳನ್ನು ನಿರ್ಧರಿಸಿಕೊಂಡು, ಸಮಯೋಚಿತವಾಗಿ ಅನುಷ್ಠಾನ ಯೋಗ್ಯ ವಾಗುವಂತಹ ಒಂದು ಕ್ರಿಯಾಶೀಲ ಮತ್ತು ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಅವಕಾಶ ಕಲ್ಪಿಸುವ ಶ್ರೇಷ್ಠ ಸಂವಿಧಾನವನ್ನು ರಚಿಸಿ ಕೊಟ್ಟಿರುವ ಬಗೆಯನ್ನು ವಿವರಿಸಿದರು.

ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬ ತತ್ವಾಧಾರಿತ ಅಂಶಗಳು ಭಾರತದ ಸಾತ್ವಿಕ ಜೀವನ ಕ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಅಲ್ಲದೆ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಭ್ರಾತೃತ್ವ, ಶಾಂತಿ ಹಾಗೂ ಅಂತರಾಷ್ಟ್ರೀಯ ಸಹಕಾರ ಎಂಬ ಆದರ್ಶಗಳು ಭಾರತೀಯ ಸಂವಿಧಾನದ ಉತ್ಕೃಷ್ಟತೆಯನ್ನು ಉತ್ತುಂಗಕ್ಕೆ ಏರಿಸಿವೆ ಎಂದರು.

ಡಾ. ಸುಗುಣಾ ಬಸವರಾಜ್ ಮಾತನಾಡಿ, ಸಂವಿಧಾನವನ್ನು ಓದಿ ತಿಳಿದುಕೊಳ್ಳುವಂತೆ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಂತೆ ವಿದ್ಯಾರ್ಥಿನಿಯರಿಗೆ ಕರೆಕೊಟ್ಟರು.

ರಾಜ್ಯಶಾಸ್ತ್ರ ಉಪನ್ಯಾಸಕ ಬಿಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವಯಂ ಸೇವಕಿ ಶ್ರೇಯಾ ಸ್ವಾಗತಿಸಿದರು. ರಾಜೇಶ್ವರಿ ಪ್ರಾರ್ಥಿಸಿದರು. ಅಮೃತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT