ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ತುಂತುರು ಮಳೆಗೆ ಮುದುಡಿದ ಜನಜೀವನ

Last Updated 22 ಜುಲೈ 2021, 13:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದಲೇ ತುಂತುರು ಮಳೆಯು ಎಡೆಬಿಡದೆ ಬೀಳುತ್ತಿದ್ದು ತಂಪು ವಾತಾವರಣ ಮನೆಮಾಡಿದ್ದು, ಜನಜೀವನ ಮುದುರಿಕೊಂಡಿದೆ.

ಮಲೆನಾಡು ಪ್ರದೇಶಗಳಲ್ಲಿ ಕಾಣುವಂತೆಯೆ, ರಾಯಚೂರಿನಲ್ಲಿಯೂ ಜನರು ಗುರುವಾರ ತುಂತುರು ಮಳೆಯಲ್ಲಿಯೇ ಜನಸಂಚಾರ ಮತ್ತು ವಾಹನಗಳ ಸಂಚಾರ ಮುಂದುವರಿದಿತ್ತು. ಬಹುತೇಕ ಜನರು ಚಳಿ ಹಾಗೂ ಮಳೆನೀರಿನಿಂದ ರಕ್ಷಿಸಿಕೊಳ್ಳಲು ಜರ್ಕಿನ್‌ ಹಾಗೂ ತಲೆಗೆ ಟೋಪಿ ಧರಿಸಿಕೊಂಡಿದ್ದರು. ಕೆಲವರು ಕೊಡೆಗಳ ಆಶ್ರಯದಲ್ಲಿ ನಡೆದುಕೊಂಡು ಹೋಗುತ್ತಿರುವ ಚಿತ್ರಣ ಎಲ್ಲೆಡೆಯಲ್ಲೂ ಕಂಡುಬಂತು.

ನೀರು ಹರಿಯುವಷ್ಟು ದೊಡ್ಡಪ್ರಮಾಣದ ಮಳೆಯಿಲ್ಲದ ಕಾರಣ, ಬಿಟಿರಸ್ತೆಗಳು, ಕಚ್ಚಾರಸ್ತೆಗಳು ಹಾಗೂ ಬಡಾವಣೆ ರಸ್ತೆಗಳೆಲ್ಲವೂ ಕೆಸರಿನಿಂದ ತುಂಬಿವೆ. ಕಚ್ಚಾರಸ್ತೆಗಳ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು, ವಾಹನಗಳ ಸಂಚಾರವು ಅಸ್ತವ್ಯಸ್ತವಾಗಿದೆ. ಬೈಕ್‌, ಆಟೋ ಸವಾರರು ನಿಧಾನವಾಗಿ ಸಂಚರಿಸುವುದು ಅನಿವಾರ್ಯವಾಗಿತ್ತು. ಜನರು ಬಡಾವಣೆ ರಸ್ತೆಗಳಲ್ಲಿ ನಡೆದು ಹೋಗುವುದು ಅನಾನುಕೂಲವಾಗುತ್ತಿದೆ.

ರಾಯಚೂರು ನಗರದ ಚಂದ್ರಮೌಳೇಶ್ವರ ವೃತ್ತ, ತೀನ್‌ಕಂದಿಲ್‌, ಗಂಜ್‌ ರಸ್ತೆ, ಎಪಿಎಂಸಿ, ಮಹಾವೀರ ವೃತ್ತ, ಬಸವನಭಾವಿ ಚೌಕ್‌, ಪಟೇಲ್‌ ಚೌಕ್‌ಗಳಲ್ಲಿ ಅಂಗಡಿಮುಂಗಟ್ಟುಗಳು ತೆರೆದುಕೊಂಡಿದ್ದವು. ಗ್ರಾಮೀಣ ಭಾಗಗಳಿಂದ ಸಂತೆಗಾಗಿ ಬಂದಿದ್ದ ಜನರು ಕೆಸರು ತುಂಬಿದ ರಸ್ತೆಗಳಲ್ಲಿಯೇ ತುಂತುರು ಮಳೆಯಲ್ಲಿ ನೆನೆದುಕೊಂಡು ಸಂಚರಿಸಿದರು. ಬೀದಿ ವ್ಯಾಪಾರವು ಎಂದಿನಂತೆ ಇರಲಿಲ್ಲ. ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮಾರ್ಗದಲ್ಲಿ, ಸರಾಫ್‌ ಬಜಾರ್‌, ಮಹಿಳಾ ಸಮಾಜ ಮೈದಾನ, ಮಾವಿನಕೆರೆ ಮಾರ್ಗದಲ್ಲಿ ತರಕಾರಿ ಹಾಗೂ ಇತರೆ ವ್ಯಾಪಾರಿಗಳು ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ.

ಕವಿತಾಳ ವರದಿ: ಬುಧವಾರ ರಾತ್ರಿಯಿಂದ ಸತತ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಹಳೇ ಬಸ್ ನಿಲ್ದಾಣ, , ಮಾನ್ವಿ ಮತ್ತು ಮಸ್ಕಿಗೆ ಹೋಗುವ ಬಸ್ ನಿಲ್ಲಿಸುವ ಸ್ಥಳದಲ್ಲಿ, ಸರ್ಕಾರಿ ಕಾಲೇಜು ಮುಂಭಾಗ ಮತ್ತು ಆನ್ವರಿ ಕ್ರಾಸ್ ಹತ್ತಿರ ನೀರು ನಿಂತು ಕೊಳಚೆ ನಿರ್ಮಾಣವಾಗಿದೆ.

’15 ದಿನಗಳಿಂದ ಪ್ರತಿದಿನ ಮಳೆ ಸುರಿಯುತ್ತಿದ್ದು ಹೊಲಗಳಲ್ಲಿ ಕಾಲಿಡಲು ಸಾಧ್ಯವಾಗುತ್ತಿಲ್ಲ. ಜಮೀನುಗಳಲ್ಲಿ ಕಳೆ ಹೆಚ್ಚುತ್ತಿದ್ದು ಕಳೆ ಕೀಳಲು ಸಮಸ್ಯೆಯಾಗಿದೆ. ಹೀಗಾಗಿ ಬೆಳೆ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ’ ಎಂದು ರೈತ ಸುಭಾಶ್ಚಂದ್ರ ಚಕೋಟಿ ಹೇಳಿದರು.

ಮುದಗಲ್ ವರದಿ: ಪಟ್ಟಣ ಹಾಗೂ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಒಂದು ವಾರದಿಂದ ತುಂತುರು ಮಳೆ ಬಿಳುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ವಾಡಿಕೆಯಂತೆ ಒಂದು ವಾರದಲ್ಲಿ 18.8 ಎಂ.ಎಂ. ಮಳೆಯಾಗಬೇಕಾಗಿತ್ತು. 58.5 ಎಂ.ಎಂ. ಮಳೆಯಾಗಿದೆ. ಮಳೆಯಿಂದಾಗಿ ಯಾವುದೇ ಕೆಲಸ ನಡೆಯುತ್ತಿಲ್ಲ. ಮಳೆ ಜತೆಯಲ್ಲೇ ಜೋರಾಗಿ ತಂಪು ಗಾಳಿ ಬೀಸುತ್ತಿದೆ. ಜನರು ಮನೆಯಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT