ಶುಕ್ರವಾರ, ಮೇ 29, 2020
27 °C
ಮಲಿಯಾಬಾದ್‌, ಸಿಂಗನೋಡಿ ಗ್ರಾಮಗಳು ನಿರ್ಬಂಧಿತ ವಲಯಗಳೆಂದು ಘೋಷಣೆ

ರಾಯಚೂರು | ಜಿಲ್ಲೆಯಲ್ಲಿ 66 ಮಂದಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನದಲ್ಲಿ 40 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಕೋವಿಡ್‌ ದೃಢಪಟ್ಟವರ ಸಂಖ್ಯೆಯು 66 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕಿತರ ಸಂಪರ್ಕವಿರುವ ರಾಯಚೂರು ತಾಲ್ಲೂಕಿನ ಮಲಯಾಬಾದ್‌ ಮತ್ತು ಸಿಂಗನೋಡಿ ಗ್ರಾಮಗಳನ್ನು ನಿರ್ಬಂಧಿತ ವಲಯಗಳೆಂದು ಘೋಷಿಸಲಾಗಿದೆ. ಗ್ರಾಮದಿಂದ ಯಾರೂ ಹೊರಗೆ ಬರುವಂತಿಲ್ಲ. ಅವರಿಗೆ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಇದುವರೆಗೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದವರಲ್ಲಿ ಮಾತ್ರ ಕೋವಿಡ್‌ ದೃಢಪಟ್ಟಿರುವ ವರದಿಗಳು ಬಂದಿದ್ದವು. ಇದೀಗ ರಾಯಚೂರು ತಾಲ್ಲೂಕಿನ ಮಲಿಯಾಬಾದ್‌ ಗ್ರಾಮದ ಎರಡು ವರ್ಷದ ಹೆಣ್ಣು ಮಗುವಿಗೂ ಕೋವಿಡ್‌ ದೃಢಪಟ್ಟಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಪಾಲಕರು ನವೋದಯ ವೈದ್ಯಕೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು, ಅದೇ ವೇಳೆ ಸ್ಯಾಂಪಲ್‌ ಸಂಗ್ರಹಿಸಿ ಕಳುಹಿಸಲಾಗಿತ್ತು ಎಂದರು.

ಮುಂಬೈನಿಂದ ವಾಪಸಾಗಿ ಕ್ವಾರಂಟೈನ್ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬರು ಸಿಂಗನೋಡಿ ಗ್ರಾಮಕ್ಕೆ ಹೋಗಿ ಬಂದಿರುವ ಮಾಹಿತಿ ಇದೆ. ಈ ಕಾರಣಕ್ಕಾಗಿ ಸಿಂಗನೋಡಿ ಗ್ರಾಮವನ್ನು ಕೂಡಾ ನಿರ್ಬಂಧಿತ ವಲಯವೆಂದು ಘೋಷಿಸಲಾಗಿದೆ. ಶನಿವಾರ ಬಂದಿರುವ ವರದಿಗಳಲ್ಲಿ ಮೊದಲ ಬಾರಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ಬಂದಿದ್ದ 42 ವಯಸ್ಸಿನ ಮಹಿಳೆಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಈಗಾಗಲೇ ಕ್ವಾರಂಟೈನ್‌ನಲ್ಲಿದ್ದರು. ಅವರೊಂದಿಗೆ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್‌ಗೊಳಿಸಲಾಗುವುದು ಎಂದು ಹೇಳಿದರು.

ದೇವದುರ್ಗಕ್ಕೆ ಮುಂಬೈ ಸೋಂಕು: ಸೋಂಕು ದೃಢಪಟ್ಟಿರುವ 66 ಪ್ರಕರಣಗಳ ಪೈಕಿ 45 ಸೋಂಕಿತರು ದೇವದುರ್ಗ ತಾಲ್ಲೂಕಿನ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇದ್ದವರಾಗಿದ್ದಾರೆ. ಮುಖ್ಯವಾಗಿ ಮುಂಬೈನಿಂದ ಬಂದವರಿದ್ದಾರೆ. ರಾಯಚೂರು ತಾಲ್ಲೂಕಿನಲ್ಲಿ 17 ಹಾಗೂ ಲಿಂಗಸುಗೂರು ತಾಲ್ಲೂಕಿನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ. ಕ್ವಾರಂಟೈನ್‌ ಕೇಂದ್ರಗಳ ಪೈಕಿ ರಾಯಚೂರು ನಗರದ ಬೊಳಮಾನದೊಡ್ಡಿ ಮಾರ್ಗದ ಕೇಂದ್ರವು ಅತಿದೊಡ್ಡದಾಗಿದೆ. ಅಲ್ಲಿರುವ ಜನರು ಹೊರಬರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸೋಂಕಿತರೆಲ್ಲರನ್ನು ಒಪೆಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲಿಯಾಬಾದ್‌ ಮಗುವೊಂದನ್ನು ಹೊರತುಪಡಿಸಿದರೆ, ಯಾರಿಗೂ ರೋಗದ ಲಕ್ಷಣಗಳಿಲ್ಲ. ಕ್ವಾರಂಟೈನ್‌ ಉಳಿಸುವ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು