ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು| ಜಿಲ್ಲಾಡಳಿತದ ಸಹಾಯವಾಣಿಗೆ 152 ಕರೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ
Last Updated 16 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಲಾಕ್‌ಡೌನ್‌ ಆದೇಶದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ಗಂಟೆಯೂ ಕಾರ್ಯ ನಿರ್ವಹಿಸುವುದಕ್ಕಾಗಿ ಸಹಾಯವಾಣಿ ಪ್ರಾರಂಭಿಸಿದ್ದು, ಏಪ್ರಿಲ್‌ 16 ರವರೆಗೂ ಒಟ್ಟು 152 ಕರೆಗಳು ಬಂದಿವೆ.

ಪ್ರತಿಯೊಂದು ಕರೆಯ ವಿವರವನ್ನು ದಾಖಲು ಮಾಡಿಕೊಳ್ಳಲಾಗಿದೆ. ನೆರವು ಕೋರಿ ಕರೆ ಮಾಡಿದವರ ಹೆಸರು, ಎಲ್ಲಿಂದ ಕರೆ ಮಾಡಿದ್ದಾರೆ, ಏನು ಸಹಾಯ ಬೇಕಾಗಿದೆ ಎಂಬುದರ ವಿವರ ಬರೆದಿಡಲಾಗಿದೆ. ಮೂರು ಪಾಳಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಒಂದು ಪಾಳಿಯಲ್ಲಿ ಇಬ್ಬರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೂ, ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೂ ಹಾಗೂ ರಾತ್ರಿಯಿಂದ ಬೆಳಗಿನವರೆಗೂ ಸಹಾಯವಾಣಿ ಕರೆಗಳನ್ನು ಸ್ವೀಕರಿಸುವುದಕ್ಕೆ ಪಾಳಿಗಳ ಸಮಯ ನಿಗದಿ ಮಾಡಲಾಗಿದೆ.

ಏನು ನೆರವು ಬೇಕಾಗಿದೆ ಎಂಬುದನ್ನು ದಾಖಲಿಸಿಕೊಂಡ ನಂತರ ಅದನ್ನು ಪರಿಹಾರ ಮಾಡುವುದಕ್ಕಾಗಿ ಸಮಿತಿಯ ಅಧಿಕಾರಿಗಳಿಗೆ ವಿವರವನ್ನು ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಮುನ್ನಚ್ಚರಿಕೆ ಕ್ರಮಕ್ಕಾಗಿ ಮತ್ತು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುವುದಕ್ಕೆ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಹಲವು ಸಮಿತಿಗಳನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ.

ಆಂಬುಲೆನ್ಸ್‌ ಮತ್ತು ಸಂಚಾರ ನಿರ್ವಹಣೆ ಸಮಿತಿ, ಜ್ವರ ತಪಾಸಣೆ ಕ್ಲಿನಿಕ್‌ಗಳ ನಿರ್ವಹಣೆ ಸಮಿತಿ, ತುರ್ತು ಸಂದರ್ಭದ ಕ್ರಿಯಾಯೋಜನೆ ಮತ್ತು ನಿರ್ವಹಣೆ ಸಮಿತಿ, ಪ್ರಯೋಗಾಲಯ ಸಮಿತಿ, ಸಂಪರ್ಕ ಪತ್ತೆ ಹಚ್ಚುವಿಕೆ ಸಮಿತಿ, ನಿರ್ಬಂಧ ಸಮಿತಿ, ಐಸೋಲೇಷನ್‌ ನಿರ್ವಹಣೆ ಸಮಿತಿ, ಕೋವಿಡ್‌ ಆಸ್ಪತ್ರೆಗಳ ನಿರ್ವಹಣೆ ಸಮಿತಿ, ಆಹಾರ, ವಸತಿ ವ್ಯವಸ್ಥೆ ಸಮಿತಿ, ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವೃದ್ಧಿ ಸಮಿತಿ, ಅವಶ್ಯಕ ಸೇವೆಗಳ ಪೂರೈಕೆ ನಿರ್ವಹಣೆ ಸಮಿತಿ, ಆರ್ಥಿಕ ಮತ್ತು ನಾಗರೀಕ ಕಲ್ಯಾಣ ಕಾರ್ಯಕ್ರಮಗಳ ಜಾರಿಗೊಳಿಸುವ ಸಮಿತಿ, ಐಎಎಸ್‌, ಐಟಿ ತಂಡ ಸಮಿತಿ, ಚೆಕ್‌ಪೋಸ್ಟ್‌ ಮತ್ತು ಗಡಿ ನಿರ್ವಹಣಾ ಸಮಿತಿ ಲೌಕ್‌ಡೌನ್‌ ಮುಗಿಯುವವರೆಗೂ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಸಮಿತಿಯಲ್ಲಿ ಹಲವು ಅಧಿಕಾರಿಗಳಿದ್ದಾರೆ.

ಈ ಸಮಿತಿಗಳ ಪೈಕಿ ನಿಯಂತ್ರಣ ಕೊಠಡಿ ಅಥವಾ ಸಹಾಯವಾಣಿ ಕೂಡಾ ಒಂದಾಗಿದೆ. ಲಾಕ್‌ಡೌನ್‌ ಆರಂಭವಾದ ದಿನಗಳಲ್ಲಿ ವಾಹನ ಬಿಡುಗಡೆ ಮಾಡುವುದಕ್ಕೆ ಹಾಗೂ ಜನಸಂದಣಿ ಸೇರಿದ್ದ ಬಗ್ಗೆ ದೂರುಗಳು ಬರುತ್ತಿದ್ದವು. ಬೇರೆ ರಾಜ್ಯಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ಕಾರ್ಮಿಕರು ಸಂಕಷ್ಟದಲ್ಲಿರುವ ಬಗ್ಗೆಯೂ ಕರೆಗಳು ಬಂದಿವೆ. ಇತ್ತೀಚೆಗೆ ಆಹಾರಧಾನ್ಯಗಳನ್ನು ಕೋರಿ ಕರೆಗಳು ಬರುತ್ತಿವೆ ಎಂಬುದು ಅಧಿಕಾರಿಗಳ ವಿವರಣೆ

‘ಜಿಲ್ಲೆಯಲ್ಲಿ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹಾಯವಾಣಿಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಅತಿಹೆಚ್ಚು ಕರೆಗಳು ಜಿಲ್ಲಾಕೇಂದ್ರದ ಸಂಖ್ಯೆಗೆ ಬಂದಿವೆ. ಮಸ್ಕಿಯಲ್ಲಿ ಮಾತ್ರ ಕೆಲವು ಕರೆಗಳು ಸ್ವೀಕೃತವಾಗಿವೆ. ಎಲ್ಲ ಸಮಸ್ಯೆಗಳಿಗೂ ಸ್ಪಂದನೆಯಾಗಿದೆ ಎಂಬುದು ಗೊತ್ತು’ ಎಂದು ಸಹಾಯವಾಣಿ ಸಮಿತಿಗೆ ನಿಯೋಜಿತ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮಂಜುನಾಥರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT