ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಈ ಸಲ ಹತ್ತಿ ಇಳುವರಿ ಬಂಪರ್‌ ನಿರೀಕ್ಷೆ

ಜಿಲ್ಲೆಯಲ್ಲಿ ಗುರಿಮೀರಿ ಶೇ 72 ರಷ್ಟು ಅಧಿಕ ಬಿತ್ತನೆ
Last Updated 4 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿದಿದ್ದರಿಂದ ಎಲ್ಲ ಕಡೆಗಳಲ್ಲೂ ಹತ್ತಿಬೆಳೆ ಹುಲುಸಾಗಿ ಬೆಳೆದಿದ್ದು, ಹೂವುಕಾಯಿ ಬಿಡುವ ಹಂತ ತಲುಪಿದೆ. ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಬಂಪರ್‌ ಇಳುವರಿ ಕೈ ಸೇರಲಿದೆ ಎಂದು ರೈತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನೀರಾವರಿಗಿಂತಲೂ ಖುಷ್ಕಿ ಜಮೀನಿನಲ್ಲಿ ಅತಿಹೆಚ್ಚು ಹತ್ತಿ ಬೆಳೆಯಲಾಗಿದೆ. ಸಿಂಧನೂರು ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ಮಾತ್ರ ಕಳೆದ ವರ್ಷಕ್ಕಿಂತಲೂ ಕಡಿಮೆ ಹತ್ತಿ ಬಿತ್ತನೆ ಆಗಿದೆ. ರಾಯಚೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳ ರೈತರು ಗುರಿಮೀರಿ ಹತ್ತಿ ಬಿತ್ತನೆ ಮಾಡಿದ್ದು, ನಿರೀಕ್ಷೆಯಂತೆ ಇದುವರೆಗೂ ಉತ್ತಮವಾಗಿಯೆ ಬೆಳವಣಿಗೆ ಆಗಿದೆ. ಇವರೆಗೂ ಯಾವುದೇ ರೋಗಬಾಧೆ ಕಂಡುಬಂದಿಲ್ಲ.

ರಾಯಚೂರು ತಾಲ್ಲೂಕಿನಲ್ಲಿ ಶೇ 104 ರಷ್ಟು, ಮಾನ್ವಿ ತಾಲ್ಲೂಕಿನಲ್ಲಿ ಶೇ 40 ರಷ್ಟು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ಶೇ 160 ರಷ್ಟು ಗುರಿಗಿಂತಲೂ ಹೆಚ್ಚು ಹತ್ತಿ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ 86,137 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಈ ವರ್ಷ 1,48,610 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆದಿರುವುದು ಗಮನಾರ್ಹ. ಕಳೆದ ವರ್ಷ ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಹತ್ತಿಗೆ ಕಾಯಿಕೊಳೆ ರೋಗ ಆವರಿಸಿಕೊಂಡರೂ ಉತ್ತಮ ಇಳುವರಿ ಬಂದಿತ್ತು. ಮಾರುಕಟ್ಟೆಯಲ್ಲಿ ದರ ಕೂಡಾ ಯೋಗ್ಯವಾಗಿತ್ತು. ಕೇಂದ್ರ ಸರ್ಕಾರವು ಸಕಾಲಕ್ಕೆ ಬೆಂಬಲ ಬೆಲೆ ಘೋಷಿಸಿದ್ದರಿಂದ ಹತ್ತಿ ಬೆಳೆದಿದ್ದ ರೈತರೆಲ್ಲ ಬರಗಾಲದ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿತ್ತು. ಹತ್ತಿ ಬೆಳೆಯಲು ರೈತರ ನಂಬಿಕೆ ಹೆಚ್ಚಾಗಿದ್ದರಿಂದ ಈ ವರ್ಷ ಗುರಿಮೀರಿ ಸಾಧನೆ ಆಗಿದೆ.

ಹೆಚ್ಚು ಖರ್ಚು:ಹತ್ತಿ ಬೆಳೆಯುವುದಕ್ಕೆ ರೈತರು ಈ ವರ್ಷ ಕಳೆದ ವರ್ಷಕ್ಕಿಂತಲೂ ಹೆಚ್ಚು ಕೃಷಿವೆಚ್ಚ ಮಾಡುವ ಅನಿವಾರ್ಯತೆ ಎದುರಾಗಿದೆ. ನೆಲದ ತೇವಾಂಶ ಕಡಿಮೆ ಆಗುತ್ತಿದ್ದಂತೆ ಬಿಟ್ಟುಬಿಡದೆ ಮಳೆ ಸುರಿದಿದ್ದರಿಂದ ಹತ್ತಿಬೆಳೆಗೆ ಸರಿಸಮನಾಗಿ ಕಳೆಯೂ ಬೆಳೆದಿದೆ. ಕಳೆ ತೆಗೆದುಹಾಕಿ ಹತ್ತಿ ಉಳಿಸಿಕೊಳ್ಳಲು ಬಹಳಷ್ಟು ರೈತರು ಸಂಕಷ್ಟ ಪಡುತ್ತಿದ್ದಾರೆ. ಮಳೆನೀರು ಹರಿದುಹೋಗುವ ಇಳಿಜಾರು ಜಮೀನುಗಳಲ್ಲಿ ಅಷ್ಟೊಂದು ಕಳೆ ಬೆಳದಿಲ್ಲ. ಸಮತಟ್ಟಾದ ಭೂಮಿಗಳಲ್ಲಿ ಕಳೆ ಆವರಿಸಿಕೊಂಡಿದೆ. ಕೃಷಿ ಕೂಲಿ ಕಾರ್ಮಿಕರಿಗೆ ಅಧಿಕ ದಿನಗೂಲಿ ಕೊಟ್ಟು ಕೆಲಸ ಮಾಡಿಸುತ್ತಿದ್ದಾರೆ. ಬಹಳಷ್ಟು ರೈತರು ಕಳೆಗೆ ಔಷಧಿ ಸಂಪರಣೆ ಮಾಡುತ್ತಿದ್ದಾರೆ.

‘ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಬೆಳೆಗೆ ತಕ್ಕಷ್ಟು ಮಳೆ ಆಗಿದೆ. ಬಿಡದೆ ಸುರಿದ ಮಳೆಯಿಂದ ಬೆಳೆ ಹಾನಿ ಆಗುವ ಹಂತಕ್ಕೆ ತಲುಪಿದಾಗ ಸ್ವಲ್ಪ ಬಿಡುವ ಸಿಕ್ಕಿತ್ತು. ಬೆಳೆಗಳಲ್ಲಿ ತೇವಾಂಶ ಕಡಿಮೆ ಆಗುತ್ತಿದ್ದಂತೆ ಮಳೆ ಸುರಿದು ಬೆಳೆಗಳನ್ನು ಸಂರಕ್ಷಿಸುತ್ತಿದೆ. ಹತ್ತಿ ಬೆಳೆಯು ಎರಡೂವರೆ ತಿಂಗಳಿನದ್ದು, ಇನ್ನು ಎರಡು ತಿಂಗಳು ಕಳೆದ ಬಳಿಕ ಸ್ಪಷ್ಟ ಚಿತ್ರಣ ಗೊತ್ತಾಗುತ್ತದೆ. ಹವಾಮಾನದಲ್ಲಿ ಬದಲಾವಣೆ ಆಗದಿದ್ದರೆ, ಮಾರುಕಟ್ಟೆಯಲ್ಲಿ ಉತ್ತಮ ದರ ಬಂದರೆ ರೈತರು ಯಾರಿಂದಲೂ ಸಹಾಯ ಕೇಳುವುದಿಲ್ಲ. ಸಾಲಮನ್ನಾ ಮಾಡುವಂತೆ ಸರ್ಕಾರಕ್ಕೆ ಕೇಳುವುದೇ ಇಲ್ಲ’ ಎನ್ನುತ್ತಾರೆ ಬಳಗಾನೂರ ರೈತ ಮಲ್ಲೇಶ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT