ಶನಿವಾರ, ಜೂನ್ 19, 2021
27 °C
30 ಹಾಸಿಗೆ ಸೌಲಭ್ಯ, ಆಮ್ಲಜನಕ, ವೆಂಟಿಲೇಟರ್‌ ವ್ಯವಸ್ಥೆ

ಸಿಂಧನೂರು: ಹೈಟೆಕ್‌ ಕೋವಿಡ್‌ ಆಸ್ಪತ್ರೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘ, ಸುಕೋ ಬ್ಯಾಂಕ್, ಐಎಂಎ ಮತ್ತು ಜನತಾ ಸೌಹಾರ್ದ ಸಹಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಿರುವ 30 ಹಾಸಿಗೆಯ ಹೈಟೆಕ್ ಕೋವಿಡ್ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆನ್‌ಲೈನ್‌ ಮೂಲಕ ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಕೊರೊನಾ ಮಹಾಮಾರಿ ದೇಶದಾದ್ಯಂತ ವ್ಯಾಪಿಸಿದ್ದು, ಅನೇಕ ರೋಗಿಗಳು ಬೆಡ್, ವೆಂಟಿಲೇಟರ್, ಆಮ್ಲಜನಕ, ರೆಮ್‍ಡಿಸಿವಿರ್ ಚುಚ್ಚುಮದ್ದುಗಳಿಗಾಗಿ ಪರದಾಡುತ್ತಿದ್ದಾರೆ. ಸರ್ಕಾರ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತಲೂ ಶೇ 50 ರಷ್ಟು ಕಡಿಮೆ ಪಡೆದು ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾಗಿರುವ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ರಾಜ್ಯದ ಹಲವು ಕಡೆ ಅನೇಕ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿದ್ದಾರೆ. ಆದರೆ ಸಿಂಧನೂರಿನ ಭಾರತೀಯ ವೈದ್ಯಕೀಯ ಸಂಘದವರು ತಮ್ಮ ಜೀವದ ಹಂಗು ತೊರೆದು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮುಂದಾಗಿರುವುದು ಇತರ ವೈದ್ಯರಿಗೆ ಮಾದರಿಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸುಕೋ ಬ್ಯಾಂಕ್ ಜನಪರ ಕಾಳಜಿಯೊಂದಿಗೆ ಯಾವುದೇ ಲಾಭ ಬಯಸದೆ ಜನಪರ ಸೇವೆಗೆ ಅಣಿಯಾಗಿರುವುದು ಉತ್ತಮವಾಗಿದೆ ಎಂದು ಅವರು ತಿಳಿಸಿದರು.

ಮಕ್ಕಳ ತಜ್ಞ ಡಾ.ಶಿವರಾಜ ಮಾತನಾಡಿ,‘ಆಸ್ಪತ್ರೆಯಲ್ಲಿ ಜಂಬೋ ಸಿಲಿಂಡರ್ ವ್ಯವಸ್ಥೆ, ಸುಕೋ ಬ್ಯಾಂಕ್‍ನಿಂದ ಆಮ್ಲಜನಕ ತರಲು ಲಾರಿ, ವಾಹನ ಚಾಲಕರ ವ್ಯವಸ್ಥೆ ಇರುತ್ತದೆ’ ಎಂದು ವಿವರಿಸಿದರು.

ಶಾಸಕ ವೆಂಕಟರಾವ್ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಸುಕೋಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ, ಐಎಂಎ ಅಧ್ಯಕ್ಷ ಡಾ.ಸುಬ್ಬರಾವ್, ಡಾ.ಬಿ.ಎನ್.ಪಾಟೀಲ, ಡಾ.ಚನ್ನನಗೌಡ ಪಾಟೀಲ ಹಾಗೂ ಜನತಾ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.