ಗುರುವಾರ , ಆಗಸ್ಟ್ 5, 2021
22 °C

ಕ್ಷಯರೋಗದಿಂದ ಮಹಿಳೆ ಸಾವು: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕ್ಷಯರೋಗ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆಯೊಬ್ಬರು ನಗರದ ಒಪೆಕ್ ಆಸ್ಪತ್ರೆಯ ಆವರಣದಲ್ಲಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತ ಮಹಿಳೆಗೆ ಮೇ 30ರಂದು ತೀವ್ರ ಉಸಿರಾಟದ ತೊಂದರೆ ಕಂಡುಬಂದ ಕಾರಣ ಎಸ್‌ಎಆರ್‌ಐ ಪ್ರಕರಣವೆಂದು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 25ರಂದು ಬೀದರಿನಿಂದ ರಾಯಚೂರಿಗೆ ಆಗಮಿಸಿದ್ದರು. 30ರಂದು ರಿಮ್ಸ್‌ಗೆ ದಾಖಲಾದ ಅವರನ್ನು ಜೂನ್‌ 2ರಂದು ಗಂಟಲಿನ ದ್ರವವನ್ನು ಕೋವಿಡ್ ಪರೀಕ್ಷೆಗಾಗಿ ಕಳುಹಿಸಲಾಗಿತ್ತು, ಜೂನ್‌ 3ರಂದು ಬಂದ ಫಲಿತಾಂಶದಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದರು.

ಅಂತ್ಯ ಸಂಸ್ಕಾರ ಕೋವಿಡ್-19 ಪ್ರೋಟೋಕಾಲ್‌ನಂತೆಯೆ ನೆರವೇರಿಸಲಾಗುತ್ತದೆ ಎಂದು ಹೇಳಿದರು.

ಗರ್ಭಪಾತವಾದ ಮಹಿಳೆ ಆರೋಗ್ಯ ಸ್ಥಿರ: ಮತ್ತೊಂದು ಪ್ರಕರಣದಲ್ಲಿ ಕೋವಿಡ್ ದೃಢಪಟ್ಟಿದ್ದ ದೇವದುರ್ಗ ತಾಲ್ಲೂಕಿನ ಕೋತ್ತಿಗುಡ್ಡದ 36 ವರ್ಷದ ಮಹಿಳೆ ಮುಂಬೈನಿಂದ ಹಿಂತಿರುಗಿ ಬಂದಿದ್ದರು. ಮೂರನೇ ಮಗುವಿಗಾಗಿ ಗರ್ಭಿಣಿಯಾಗಿದ್ದರು. ಹೈಪರ್ ಥೈರಾಯಿಡ್‌ನಿಂದ ಬಳಲುತ್ತಿದ್ದ ಅವರನ್ನು ಮೇ 23 ರಂದು ಒಕೆಪ್‌ಗೆ ದಾಖಲಿಸಲಾಗಿತ್ತು. ಅವರಿಗೆ ಜೂನ್ 6 ರಂದು ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಪ್ರಸೂತಿ ತಜ್ಞರು ಪರೀಕ್ಷೆ ನಡೆಸಿದ್ದರು. ಜೂನ್ 8 ರಂದು ಅವರನ್ನು ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಗರ್ಭಪಾತವಾಗಿರುತ್ತದೆ. ಸದ್ಯ ಆ ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಕ್ವಾರೆಂಟೈನ್‌ನಲ್ಲಿರುವ ಜನರ ಮೇಲೆ ನಿಗಾವಹಿಸಲು ಐವರು ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ, ಬಿಲ್ ಕಲೆಕ್ಟರ್ ಮತ್ತು ಗ್ರಾಮ ಸಹಾಯಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಕ್ವಾರೆಂಟೈನ್ ಉಲ್ಲಂಘಿಸಿದ್ದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ ಮಾತನಾಡಿ, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿರ್ದೇಶನದಂತೆ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಡಾ.ಕೆ. ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು