ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯಾಂಗದ ಮಧ್ಯಪ್ರವೇಶ ಸೂಕ್ತ’

ನೀರಾವರಿ ಇಲಾಖೆಗಳಲ್ಲಿ ₹20 ಸಾವಿರ ಕೋಟಿ ಅವ್ಯವಹಾರ ಆರೋಪ
Last Updated 6 ಜುಲೈ 2021, 3:29 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಕೃಷ್ಣಾ ಭಾಗ್ಯ ಜಲ ನಿಗಮ ಸೇರಿದಂತೆ ರಾಜ್ಯದ ನೀರಾವರಿ ಇಲಾಖೆಗಳಲ್ಲಿ ₹20 ಸಾವಿರ ಕೋಟಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದಿವೆ. ಕಾರಣ ನ್ಯಾಯಾಂಗ ಇಲಾಖೆ ಸ್ವಯಂ ಪ್ರೇರಿತವಾಗಿ ಮಧ್ಯ ಪ್ರವೇಶಿಸುವುದು ಸೂಕ್ತ’ ಎಂದು ಸಿಪಿಐ–ಎಂಎಲ್‍ (ರೆಡ್‍ ಸ್ಟಾರ್) ಮುಖಂಡ ಆರ್. ಮಾನಸಯ್ಯ ಅಭಿಪ್ರಾಯಪಟ್ಟರು.

ಸೋಮವಾರ ಕೃಷ್ಣಾ ಭಾಗ್ಯ ಜಲನಿಗಮ ವ್ಯಾಪ್ತಿಯ ಅಕ್ರಮ ಟೆಂಡರ್‌ಗಳನ್ನು ರದ್ದುಪಡಿಸಲು ಆಗ್ರಹಿಸಿ ನಡೆಯುತ್ತಿರುವ 5ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದ ಅವರು, ‘ನಂದವಾಡಗಿ, ರಾಂಪೂರ ಏತ ನೀರಾವರಿ ಯೋಜನೆ, ನಾರಾಯಣಪುರ ಬಲದಂಡೆ ನಾಲೆ ಮತ್ತು ವಿತರಣಾ ನಾಲೆಗಳ ಅಭಿವೃದ್ಧಿ ಹೆಸರಲ್ಲಿ ಅಕ್ರಮ ಟೆಂಡರ್, ಒಡಂಬಡಿಕೆ ನಿಯಮಗಳು, ವಿನ್ಯಾಸ ಬದಲಿ, ಗುಣಮಟ್ಟ ಸೇರಿದಂತೆ ಇತರೆ ನಿಯಮಗಳ ಉಲ್ಲಂಘನೆಯಾಗಿವೆ’ ಎಂದು ದೂರಿದರು.

‘ಎಲ್‍ ಆ್ಯಂಡ್‍ ಟಿ, ಮೇಘಾ, ತೆಹಲ್‍, ಎನ್‍ಡಿ ವಡ್ಡರ, ಡಿವೈ ಉಪ್ಪಾರ ಕಂಪೆನಿಗಳು ಕೈಗೆತ್ತಿಕೊಂಡ ಕಾಮಗಾರಿ ಸ್ಥಗಿತಗೊಳಿಸಿ ಕ್ರಿಮಿನಲ್‍ ಮೊಕದ್ದಮೆ ದಾಖಲಿಸಿ ಜಂಟಿ ಸದನ ಸಮಿತಿ ನೇಮಿಸುವಂತೆ ನಡೆಯುತ್ತಿರುವ ಧರಣಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕೃಷ್ಣ ಭಾಗ್ಯ ಜಲ ನಿಗಮದ ಅಧ್ಯಕ್ಷರಾಗಿದ್ದು ಯೋಜನೆಗಳ ಹೆಸರಲ್ಲಿ ಹಣ ದುರ್ಬಳಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಂಘಟನೆ ₹ 4500 ಕೋಟಿ ಅವ್ಯವಹಾರ ತನಿಖೆಗೆ ಆಗ್ರಹಿಸಿ ಧರಣಿ ಆರಂಭಿಸಿತ್ತು. ಈ ಮಧ್ಯೆ ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿ ವಿತರಣೆ ನಾಲೆಗಳ ಅಧುನೀಕರಣಕ್ಕೆ ₹1466 ಕೋಟಿ ಅಕ್ರಮ ಟೆಂಡರ್ ಹೆಸರಲ್ಲಿ ಕೆಲಸ ಆರಂಭಿಸುವ ಜೊತೆಗೆ ₹612 ಕೋಟಿ ನಿರ್ವಹಣೆ ಮತ್ತು ಮೇಲುಸ್ತುವಾರಿ ಟೆಂಡರ್ ಆದೇಶ ಹೊರ ಬಿದ್ದಿರುವುದು ಅಚ್ಚರಿ ಮೂಡಿಸಿದೆ. ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗದಿದ್ದರೆ ಹೋರಾಟದ ಸ್ವರೂಪ ಬದಲಾಯಿಸುತ್ತೇವೆ’ ಎಂದು ತಿಳಿಸಿದರು.

ಧರಣಿಯಲ್ಲಿ ಸಿಪಿಐ –ಎಂಎಲ್‍ (ರೆಡ್‍ಸ್ಟಾರ್) ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಜಿಲ್ಲಾ ಘಟಕ ಅಧ್ಯಕ್ಷ ಅಮರೇಶ, ಮುಖಂಡರಾದ ಹುಚ್ಚಪ್ಪ, ಹನುಮಂತ, ತಿಪ್ಪರಾಜ, ಅಮರೇಶ, ತಿಪ್ಪಣ್ಣ, ಕುಪ್ಪಣ್ಣ, ಬಸವರಾಜ, ಬಂದೇನವಾಜ, ನಾಗಪ್ಪ, ರಾಮಣ್ಣ, ಅಂಬಮ್ಮ, ರೇಣಮ್ಮ, ಹುಲಿಗೆಮ್ಮ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT