ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಪರಾಧ ಕೃತ್ಯಗಳು ಇಳಿಮುಖ -ಎಸ್‌ಪಿ

Last Updated 17 ನವೆಂಬರ್ 2018, 10:05 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅಪರಾಧಗಳ ತಡೆಗಾಗಿ ಮತ್ತು ಅಪರಾಧಗಳ ತನಿಖೆಗಾಗಿ ಪ್ರತ್ಯೇಕ ಪೊಲೀಸ್‌ ತಂಡಗಳನ್ನು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವುದರಿಂದ 2018 ರಲ್ಲಿ ಅಪರಾಧ ಕೃತ್ಯಗಳಲ್ಲಿ ಇಳಿಮುಖವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರಬಾಬು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಪೊಲೀಸ್‌ ವಿಭಾಗದಲ್ಲಿ 2018 ರ ಆರಂಭದಿಂದ ಇವರೆಗೂ ಎಂಟು ಕೊಲೆ ಪ್ರಕರಣಗಳು ನಡೆದಿದ್ದು, ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ಪತ್ತೆಯಾಗಿದ್ದಾರೆ. 2016 ರಲ್ಲಿ 16 ಕೊಲೆಗಳು ಮತ್ತು 2017 ರಲ್ಲಿ 18 ಕೊಲೆ ಪ್ರಕರಣಗಳು ನಡೆದಿದ್ದವು. ಜಿಲ್ಲೆಯಾದ್ಯಂತ 2018 ರಲ್ಲಿ 30 ಕೊಲೆಗಳು, 2016 ರಲ್ಲಿ 49 ಕೊಲೆಗಳು ಮತ್ತು 2017 ರಲ್ಲಿ 42 ಕೊಲೆಗಳಾಗಿವೆ. ಆದರೆ, ಎರಡು ವರ್ಷಗಳಿಂದ ಯಾವುದೇ ದರೋಡೆ ಪ್ರಕರಣಗಳು ನಡೆದಿಲ್ಲ. 2016 ರಲ್ಲಿ ಎರಡು ದರೋಡೆಗಳಾಗಿದ್ದವು ಎಂದರು.

ಎಸ್‌ಸಿ, ಎಸ್‌ಟಿ ಪ್ರಕರಣಗಳು ಈ ವರ್ಷ 29 ದಾಖಲಾಗಿವೆ. 2016 ರಲ್ಲಿ 33 ಮತ್ತು 2017 ರಲ್ಲಿ 40 ಪ್ರಕರಣಗಳಾಗಿದ್ದವು. ಕಳವು ಪ್ರಕರಣಗಳು ಈ ವರ್ಷ 99 ದಾಖಲಾಗಿವೆ. 2017 ರಲ್ಲಿ 93 ಮತ್ತು 2016 ರಲ್ಲಿ 133 ಪ್ರಕರಣಗಳಾಗಿದ್ದವು. ಜಿಲ್ಲೆಯ ಅಪರಾಧ ಕೃತ್ಯಗಳ ಅಂಕಿಅಂಶಗಳು ಇದೇ ರೀತಿ ಇಳಿಮುಖವಾಗಿವೆ. ಪ್ರತಿ ಅಪರಾಧ ವಿಧಾನದಲ್ಲಿ ಸ್ವಲ್ಪ ಪ್ರಮಾಣ ಕಡಿಮೆಯಾಗಿರುವುದು ಒಳ್ಳೆಯ ಸಂಗತಿ. ಅಪರಾಧ ತಡೆ ಮತ್ತು ಅಪರಾಧ ತನಿಖೆಯ ಪೊಲೀಸರ ತಂಡಗಳು ಯಶಸ್ವಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಇದು ಸಾಕ್ಷಿ ಎಂದು ತಿಳಿಸಿದರು.

ಅಂತರರಾಜ್ಯ ಕಳ್ಳರು: ರಾಯಚೂರಿನ ಕೈಗಾರಿಕಾ ವಲಯದಲ್ಲಿ ಈಚೆಗೆ ನಡೆದ ಸರಣಿ ಕಳ್ಳತನ ಪ್ರಕರಣಗಳಲ್ಲಿ ಅಪರಾಧಿಗಳನ್ನು ಗುರುತಿಸಲಾಗಿದೆ. ಕಳ್ಳತನ ಮಾಡುವುದಕ್ಕೆ ಮಹಾರಾಷ್ಟ್ರದಿಂದ ಗುಂಪು ಬಂದಿರುವುದು ಪಕ್ಕಾ ಆಗಿದೆ. ಅಪರಾಧಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಸಿಸಿಟಿವಿ: ಕರ್ನಾಟಕ ಪಬ್ಲಿಕ್‌ ಸೆಫ್ಟ್‌ ಆ್ಯಕ್ಟ್‌ ಪ್ರಕಾರ 100 ಕ್ಕಿಂತ ಹೆಚ್ಚು ಜನರು ಸೇರುವ ಕಡೆಗಳಲ್ಲಿ ನಿಗಾ ವಹಿಸಬೇಕಾಗುತ್ತದೆ. ಹೀಗಾಗಿ ರಾಯಚೂರು ನಗರದ ಶಾಲಾ, ಕಾಲೇಜುಗಳು, ಬಸ್‌ ನಿಲ್ದಾಣ, ವಾಣಿಜ್ಯ ಮಳಿಗೆಗಳು ಸೇರಿದಂತೆ 446 ಕಟ್ಟಡಗಳಲ್ಲಿ ಸಿಟಿಟಿವಿ ಅಳವಡಿಸುವುದಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ವಾಹನದಟ್ಟಣೆ ನಿಯಂತ್ರಣಕ್ಕಾಗಿ ಹೆಚ್ಚುವರಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ರಾಯಚೂರಿನ ಕೈಗಾರಿಕಾ ವಲಯದಲ್ಲಿ ಹೊಸದಾಗಿ ಪೊಲೀಸ್‌ ಅವುಟ್‌ಪೋಸ್ಟ್‌ ತೆರೆಯಲಾಗುವುದು. ಡಿಸೆಂಬರ್‌ 1 ರಿಂದ 30 ರವರೆಗೂ ಜಿಲ್ಲೆಯಾದ್ಯಂತ ಅಪರಾಧ ತಡೆ ಮಾಸಾಚರಣೆ ಮಾಡಿ, ಜನರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ. ಪಾಟೀಲ, ಡಿವೈಎಸ್‌ಪಿ ಹರೀಶ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸೈಬರ್‌ ಠಾಣೆ ಕ್ರಿಯಾಶೀಲ
ಸಾಮಾಜಿಕ ಜಾಲತಾಣ ಹಾಗೂ ಹಣದ ವಂಚನೆ ಪ್ರಕರಣಗಳನ್ನು ಬೇಧಿಸುವುದಕ್ಕಾಗಿ ಪ್ರತ್ಯೇಕ ಸೈಬರ್‌ ಠಾಣೆಯಲ್ಲಿ ತೆರೆಯಲಾಗಿದೆ. ಈಗಷ್ಟೇ ಹೊಸ ಇನ್‌ಸ್ಪೆಕ್ಟರ್‌ ಬಂದಿದ್ದು, ತರಬೇತಿಗಾಗಿ ಕಳುಹಿಸಲಾಗಿದೆ. ಸದ್ಯ 18 ಪ್ರಕರಣಗಳು ತನಿಖೆ ಪ್ರಗತಿಯಲ್ಲಿದೆ. ಪ್ರತಿಯೊಂದು ಠಾಣೆಯಲ್ಲಿ ಸೊಷಿಯಲ್‌ ಮೆಡಿಯಾ ನೆಟ್‌ವರ್ಕ್‌ ಸೆಲ್‌ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಕಾನೂನು, ಶಾಂತಿ ಭಂಗಗೊಳಿಸುವ ವೈರಲ್‌ ಮಾಡುವವರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT