ಮೇಳದಲ್ಲಿ ಎರಡನೇ ದಿನವೂ ಜನಸಾಗರ

7

ಮೇಳದಲ್ಲಿ ಎರಡನೇ ದಿನವೂ ಜನಸಾಗರ

Published:
Updated:
Prajavani

ಸಿಂಧನೂರು: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪಶು ಮತ್ತು ಮತ್ಸ್ಯ ಮೇಳವು ಭಾನುವಾರವೂ ಅಕ್ಷರಶಃ ಜಾತ್ರೆಯಂತೆ ಗೋಚರಿಸಿತು. ಎಲ್ಲಿ ನೋಡಿದರೂ ಜನಸಾಗರವಿತ್ತು.

ಸಿಂಧನೂರು, ಕುಷ್ಟಗಿ ಮುಖ್ಯ ರಸ್ತೆಯಲ್ಲಿ ಹತ್ತಾರು ಪೊಲೀಸರು ನಿಂತು ವಾಹನಗಳನ್ನು ಬಿಡದೆ ಕೇವಲ ಜನರನ್ನು ಮಾತ್ರ ಕ್ರೀಡಾಂಗಣಕ್ಕೆ ಬಿಡುತ್ತಿದ್ದರು. ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಿಂದ ಜನರನ್ನು ಬಸ್‌ಗಳ ಮೂಲಕ ಕರೆತರುವ ವ್ಯವಸ್ಥೆ ಇತ್ತು. 60ಕ್ಕಿಂತ ಹೆಚ್ಚು ಬಸ್‍ಗಳು, 100 ಕ್ರೂಷರ್‌ಗಳಲ್ಲಿ ಜನರು ಪಶು ಮೇಳ ನೋಡಲು ಬಂದಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸರ್ಕಿಟ್‌ ಹೌಸ್‍ನವರೆಗೆ ವಾಹನಗಳ ದಟ್ಟಣೆ, ಜನಸಂದಣಿ ನಗರದಲ್ಲಿ ಇದೇ ಪ್ರಥಮ ಬಾರಿ ಕಂಡು ಬಂತು.

‘ಈ ಹಿಂದೆ ಆಯೋಜಿಸಿದ್ದ ಸಿಂಧನೂರು ಹಬ್ಬ ಕಾರ್ಯಕ್ರಮಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಿದ್ದಾರೆ’ ಎನ್ನುವ ಮಾತುಗಳು ಸಾಮಾನ್ಯವಾಗಿದ್ದವು.

ಮತ್ಸ್ಯ ಮೇಳ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಬಂದಿದ್ದರು. ಅವರನ್ನು ಸರದಿ ಸಾಲಿನಲ್ಲಿ ನಿಲ್ಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮತ್ಸ್ಯವಾಹಿನಿ ವಿಭಾಗವು ಬೆಳಗಿನಿಂದ ಸಂಜೆ 6 ರವರೆಗೆ ಜನರನ್ನು ಒಳ ಬಿಡುವ ಹತ್ತಾರು ಪೊಲೀಸರು ಬಂದೊಬಸ್ತ್ ಕಾರ್ಯದಲ್ಲಿ ತೊಡಗಿದ್ದರು.

ಒಂದುಕಡೆ ಶ್ವಾನಮೇಳ, ಮತ್ತೊಂದು ಕಡೆ ಪಶು ಮೇಳ, ಮತ್ಸ್ಯಮೇಳ ಎಲ್ಲ ಕಡೆಯಲ್ಲೂ ಜನರೇ ಕಾಣುತ್ತಿದ್ದರು. ಇಡೀ ಕ್ರೀಡಾಂಗಣ ಜನರಿಂದ ತುಂಬಿ ತುಳುಕುತ್ತಿತ್ತು. ರೈತರು ಕುರಿ, ಮೇಕೆ, ಟಗರು, ಎತ್ತುಗಳನ್ನು ನೋಡಲು ಸಹ ಸಾಧ್ಯವಾಗದ ರೀತಿಯಲ್ಲಿ ಜನದಟ್ಟಣೆ ಹೆಚ್ಚಿತ್ತು. ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಪಶು ವೈದ್ಯಕೀಯ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಯನ್ನು ಹೇಳಲು ತೆರೆದಿದ್ದ ಮಳಿಗೆಗಳಲ್ಲೂ ಜನರು ಭರ್ತಿಯಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !