ಗುರುವಾರ , ಆಗಸ್ಟ್ 18, 2022
27 °C
ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಪ್ರತಿಭಟನೆ

‘ಹಳೆ ಪಠ್ಯಪುಸ್ತಕಗಳನ್ನೇ ಮುಂದುವರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ರೋಹಿತ್‍ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕಗಳು ಗೊಂದಲದಿಂದ ಕೂಡಿವೆ. ಕಾರಣ ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಪುಸ್ತಕಗಳನ್ನೇ ಯಥಾವತ್ತಾಗಿ ಮುಂದುವರಿಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್ ಶಾಲಂಸಾಬ ಅವರಿಗೆ ಸಲ್ಲಿಸಿದರು.

‘ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ರಾಷ್ಟ್ರಕವಿ ಕುವೆಂಪು, ಗೌತಮ ಬುದ್ಧ ಮತ್ತು ರಾಜ ಮಹಾರಾಜರು, ಸಮಾಜ ಸುಧಾರಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ಸತ್ಯ ಸಂಗತಿಗಳನ್ನು ತೆಗೆದುಹಾಕಿ ಅವಮಾನ ಮಾಡಲಾಗಿದೆ’ ಎಂದು ದೂರಿದರು. ಡಾ.ಚೆನ್ನಣ್ಣ ವಾಲೀಕಾರರ ‘ನೀ ಹೋದ ಮರುದಿನ’ ಕವಿತೆ ತೆಗೆದು ಹಾಕಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಾಠದಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಲಾಗಿದೆ. ಮಹಾಡ್‌ ಸತ್ಯಾಗ್ರಹ ಮತ್ತು ನಾಸಿಕ್‌ದ ಕಾಳರಾಮ ದೇಗುಲ ಪ್ರವೇಶದ ಹೋರಾಟ ಕೈಬಿಡಲಾಗಿದೆ. ಸಂವಿಧಾನ ಶಿಲ್ಪಿ ಎನ್ನುವ ಬಿರುದನ್ನು ತೆಗೆದು ಹಾಕಲಾಗಿದೆ’ ಎಂದು ದೂರಿದರು.

ಮಹಾತ್ಮ ಬುದ್ಧ ಕವಿತೆ ತೆಗೆದು ಹಾಕಿರುವುದು. ಗಾಂಧಿಯುಗ ಮತ್ತು ರಾಷ್ಟ್ರೀಯ ಚಳವಳಿ ಪಾಠದ ವಿಷಯ ತಿರುಚಿರುವುದು ಸೇರಿದಂತೆ ಗೊಂದಲಮಯ ಪಠ್ಯಗಳನ್ನು ವಾಪಸ್ ಪಡೆಯಬೇಕು. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‍ ಚಕ್ರವರ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಳೆ ಪಠ್ಯಪುಸ್ತಕಗಳ ಪೂರೈಕೆಗೆ ಕ್ರಮ ಕೈಗೊ ಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ, ತಾಲ್ಲೂಕು ಸಂಚಾಲಕ ಯಲ್ಲಪ್ಪ ಹಾಲಭಾವಿ, ಮುಖಂಡರಾದ ಅಕ್ರಂಪಾಷಾ, ಹುಸೇನಪ್ಪ ತರಕಾರಿ, ದುರುಗಪ್ಪ ಹಾಲಭಾವಿ, ಹನುಮೇಶ ಕುಪ್ಪಿಗುಡ್ಡ, ಅನಿಲಕುಮಾರ, ಶರಣಬಸವ ಗಿಬ್ಸ್‌, ಷಣ್ಮುಖ, ಮಹಿಬೂಬ, ಹುಸೇನಪ್ಪ ಹಾಗೂ ಸಂಜೀವಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.