ಶನಿವಾರ, ಡಿಸೆಂಬರ್ 7, 2019
21 °C

ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಗಬ್ಬೂರು ಪೊಲೀಸ್ ಠಾಣೆಯ ಮೇಲೆ ಈಚೆಗೆ ನಡೆದ ಗೂಂಡಾ ವರ್ತನೆಯ ಹಿಂದಿನ ಷಡ್ಯಂತ್ರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಿದರು.

ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ತಾಂಡವಾಡುತ್ತಿದ್ದು, ದಲಿತರನ್ನು ಪ್ರಾಣಿಗಳಿಗಿಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ. ಈಚೆಗೆ ನಡೆದಿರುವ ದಲಿತ ಮಹಿಳೆಯರ ಅತ್ಯಾಚಾರ, ಕೊಲೆಗಳು ಹಾಗೂ ದಲಿತ ಅಧಿಕಾರಿಗಳ ಅಮಾನತುಗಳು ಇದಕ್ಕೆ ಉದಾಹರಣೆಗಳಾಗಿವೆ. ಸ್ವಾತಂತ್ರ್ಯ ದೇಶದಲ್ಲಿ ಅಸ್ಪೃಶ್ಯರು 2ನೇ ಸ್ವಾತಂತ್ರ್ಯ ಸಂಗ್ರಾಮ ಮಾಡುವ ಅವಶ್ಯಕತೆಯಿದೆ ಎಂದರು.

ಗಬ್ಬೂರು ಯುವಕ ಶಿವಕುಮಾರ ಮೂರ್ಚೆ ರೋಗದಿಂದ ಕುಸಿದು ಬಿದ್ದಾಗ ಪಿಎಸ್‌ಐ ಮುದ್ದುರಂಗಸ್ವಾಮಿ ಹೋಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೂ, ಯುವಕ ಸಾವನ್ನಪ್ಪಿದ್ದಾನೆ. ಆದರೆ, ಪಿಎಸ್‌ಐ ಅವರೇ ಹೊಡೆದು ಸಾಯಿಸಿದ್ದಾರೆಂದು ಪ್ರಚಾರ ಮಾಡಿ ಠಾಣೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಸಮಾಜಘಾತುಕರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದೆ. ದಲಿತ ಸಮುದಾಯಕ್ಕೆ ಸೇರಿದ ಪಿಎಸ್‌ಐ ಹಾಗೂ ಇತರರನ್ನು ಅಮಾನತು ಮಾಡಲಾಯಿತು. ಈ ಘಟನೆಯಲ್ಲಿ ಮಾಫಿಯಾಗಳ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಘಟನೆಯ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಎಸ್‌.ಮಾರೆಪ್ಪ ವಕೀಲ, ಬಿ.ನರಸಪ್ಪ ದಂಡೋರ, ಜೆ.ಬಿ.ರಾಜು, ಹೇಮರಾಜ ಅಸ್ಕಿಹಾಳ, ಷಣ್ಮುಕಪ್ಪ ಗಂಟೆ, ಬಾಬು ದಿನ್ನಿ, ನರಸಿಂಹಲು, ಆಂಜನೇಯ, ನರಸಿಂಹಲು, ಎಂ.ಈರಣ್ಣ, ಶಿವರಾಜ, ರಂಗಪ್ಪ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)