ಲಿಂಗಸುಗೂರು: ‘ಮನುಷ್ಯ ಜೀವಿಯಾದವನು ಧರ್ಮದ ಸಂದೇಶಗಳನ್ನು ನಡೆ ನುಡಿಗಳಲ್ಲಿ ಮೈಗೂಡಿಸಿಕೊಳ್ಳಬೇಕು. ಧರ್ಮದ ಕಟ್ಟಳೆ ಮೀರಿ ಬದುಕು ನಿರ್ಮಿಸಿಕೊಳ್ಳಲು ಮುಂದಾದಲ್ಲಿ ಸಂಕಷ್ಟ ತಪ್ಪದ್ದಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸೋಮವಾರ ಒಂಬತ್ತನೇ ದಿನದ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಕಷ್ಟ ಬಂದಾಗ ದೇವರು, ಧರ್ಮಾಚರಣೆ ಮೊರೆ ಹೋಗುವುದಕ್ಕಿಂತ ನಿತ್ಯ ದೇವರ ನಾಮಸ್ಮರಣೆ, ಸತ್ಯದ ಮನನ ಮಾಡುತ್ತ ಹೋದಲ್ಲಿ ಸಂಕಷ್ಟ ಎದುರಿಸುವ ಶಕ್ತಿ ಬೆಳೆದು ಬರುತ್ತದೆ. ದೇವರು, ಧರ್ಮ, ಸತ್ಯಾತ್ಮನ ಪ್ರಾರ್ಥನೆಗೆ ಓರ್ವ ಗುರುವಿನ ಮಾರ್ಗದರ್ಶನ ಅವಶ್ಯವಿದೆ. ಈ ನಿಟ್ಟಿನಲ್ಲಿ ಗುರುವಿನ ಗುಲಾಮರಾಗಿ ಸುಂದರ ಬದುಕು ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಶಿವಾದ್ವೈತ ಸಿರಿ ಕೃತಿ ಬಿಡುಗಡೆಗೊಳಿಸಿ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಮಾತನಾಡಿ, ‘ಆಧುನಿಕತೆ, ವಿಜ್ಞಾನ ತಂತ್ರಜ್ಞಾನ ಭರಾಟೆಯಲ್ಲಿ ಭಾರತೀಯ ಸಂಸ್ಕೃತಿ, ಧರ್ಮಾಚರಣೆ ಅನುಷ್ಠಾನದಲ್ಲಿ ಯುವ ಸಮೂಹ ನಿರ್ಲಕ್ಷ್ಯ ಭಾವನೆ ಹೊಂದುತ್ತಿದ್ದಾರೆ. ಧರ್ಮದ ತಿರುಳು ಅರಿಯಲು ತಾವುಗಳೆಲ್ಲ ಧರ್ಮ ಗ್ರಂಥಗಳ ನಿರಂತರ ಅಧ್ಯಯನ ಮಾಡಬೇಕು. ವೀರಶೈವ ಧರ್ಮ ವಿಶ್ವಕ್ಕೆ ಮಹಾನ್ ಕೊಡುಗೆ ನೀಡಿದೆ. ಶರಣರು, ಸಂತರು, ಸೂಫಿಗಳ ತತ್ವಾದರ್ಶ ನಮಗೆಲ್ಲ ಮಾದರಿ’ ಎಂದರು.
ಸೂಡಿಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ‘ಆಸ್ತಿ ಅಂತಸ್ತು ಕಳೆದುಕೊಂಡ ಮನುಷ್ಯ ಸಮಾಜದಲ್ಲಿ ಬದುಕಬಹುದು. ಆದರೆ, ನಡತೆ, ಸ್ವಭಾವ ಕಳೆದುಕೊಂಡವರು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಾರಣ ಪ್ರತಿಯೊಂದು ಧರ್ಮಗಳು ಸಭೆ, ಸಮಾರಂಭ ಮೂಲಕ ನೈತಿಕ ಮೌಲ್ಯ, ಧರ್ಮದ ಆಚರಣೆ ಜಾಗೃತಿ ಮೂಡಿಸುತ್ತಿವೆ. ದಸರಾ ಸಂದರ್ಭದಲ್ಲಿ ಒಂಬತ್ತು ದಿನಗಳ ಆಚರಣೆ ಶಿವ ಶಕ್ತಿ ಜತೆಗೆ ದೇವಿ ಶಕ್ತಿ ವೃದ್ಧಿಗೆ ಸಹಕಾರಿ ಆಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ದೊಡ್ಡನಗೌಡ ಪಾಟೀಲ, ರಾಜಾ ರಾಯಪ್ಪ ನಾಯಕ ಮಾತನಾಡಿ, ‘ಜಾತಿ, ಧರ್ಮದ ಅಂಧಕಾರ ಆಚರಣೆಗಳಿಂದ ಸ್ವಸ್ಥ ಸಮಾಜ ಕನಸು ಛಿದ್ರಗೊಂಡಿದೆ. ವಿದ್ಯಾವಂತ ಸಮುದಾಯ ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಸಂಕಷ್ಟ ಎದುರಿಸುವಂತಾಗಿದೆ. ಸ್ವಸ್ಥ, ಸುಂದರ ಬದುಕು ನಿರ್ವಹಣೆಗೆ ವೀರಶೈವ ಧರ್ಮ ಮಹಾನ್ ಕೊಡುಗೆ ನೀಡಿದೆ’ ಎಂದು ಹೇಳಿದರು.
ಗುರು ರಕ್ಷೆ: ಅಫಜಲಪುರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಶಿವಣ್ಣ ಪಲ್ಲೇದ, ಎಸ್.ಡಿ ಪಾಟೀಲ, ವಿರುಪಾಕ್ಷಪ್ಪ ಕರಿಹೊಳಿ, ಸಿದ್ಧೇಶ್ವರ ಶಾಸ್ತ್ರಿ, ಚಂಬಣ್ಣ ಚವಡಿ, ಎಸ್.ಜಿ ಕಾಶಪ್ಪನವರ ಸೇರಿದಂತೆ ದಸರಾ ಸಮ್ಮೇಳನ ಸಮಿತಿ ಸದಸ್ಯರು, ಉಪ ಸಮಿತಿಗಳ ಸರ್ವ ಸದಸ್ಯರಿಗೆ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜಿದೇಶಕೇಂದ್ರ ಶಿವಾಚಾರ್ಯರು ಗುರುರಕ್ಷೆ ನೀಡಿ ಸತ್ಕರಿಸಿದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಎಡೆಯೂರು ರೇಣುಕ ಶಿವಾಚಾರ್ಯರು ಸೇರಿದಂತೆ ಕರೆಗುಡ್ಡ, ದೇವಾಪುರ, ಸಂಗೊಳ್ಳಿ, ಸಿದ್ಧರಬೆಟ್ಟ, ರೌಡಕುಂದ, ಉಕ್ಕಡಗತ್ರಿ, ಪುರ್ತಗೇರಿ, ಮಾವಿನಹಳ್ಳಿ, ಸಂತೆಕೆಲ್ಲೂರು, ನೀರೂರು, ಮಾದಿಹಳ್ಳಿ ಶಿವಾಚಾರ್ಯರು ಇದ್ದರು.
ವಕೀಲರಾದ ಸಿಸಿ ಕರಡಕಲ್ಲ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.