ಬುಧವಾರ, ಆಗಸ್ಟ್ 4, 2021
24 °C
ದರ ಹೆಚ್ಚಳ ತಡೆಗಟ್ಟಲು ಕ್ರಮವಹಿಸಿದ ಜಿಲ್ಲಾಡಳಿತ

ಚಿಲ್ಲರೆ ವಹಿವಾಟು ಪರಿಶೀಲಿಸಿದ ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದಿನಸಿ ಹಾಗೂ ತರಕಾರಿ ಖರೀದಿಸುವುದಕ್ಕೆ ಜನರಿಗೆ ಗುರುವಾರ ಅವಕಾಶ ನೀಡಿರುವುದನ್ನು ವ್ಯಾಪಾರಿಗಳು ಅವಕಾಶ ಮಾಡಿಕೊಂಡು ಸುಲಿಗೆ ಮಾಡದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿತ್ತು. ಆದರೂ ವಸ್ತುಸ್ಥಿತಿ ಅರಿಯಲು ಸ್ವತಃ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ದಿನಸಿ ಅಂಗಡಿಗಳಿಗೆ ಮತ್ತು ತರಕಾರಿ ಮಾರಾಟಗಾರರಲ್ಲಿಗೆ ತೆರಳಿ ಪರಿಶೀಲಿಸಿದ್ದು ವಿಶೇಷವಾಗಿತ್ತು.

ಕೇಂದ್ರ ಬಸ್ ನಿಲ್ದಾಣ ಮಾರ್ಗ, ಮಹಾವೀರ ಸರ್ಕಲ್, ತೀನ್ ಕಂದೀಲ್, ಬಟ್ಟೆ ಬಜಾರ್, ಸರ್ದಾರ್‌ ವಲ್ಲಭಬಾಯ್‌ ಪಟೇಲ್ ರಸ್ತೆ, ಚಂದ್ರಮೌಳೇಶ್ವರ ಸರ್ಕಲ್, ಬಸವನಬಾವಿ ಸರ್ಕಲ್, ಗಂಜ್ ಸರ್ಕಲ್ ಹಾಗೂ ಮಹಿಳಾ ಸಮಾಜ ಮೈದಾನ ಸೇರಿದಂತೆ ವಿವಿಧೆಡೆ ಸುತ್ತಾಡಿದರು.

ಕೆಲವೆಡೆ ಮಾಸ್ಕ್ ಧರಿಸದೇ ಗ್ರಾಹಕರಿಗೆ ಕಿರಾಣಿ ವಸ್ತುಗಳನ್ನು ವಿತರಿಸುತ್ತಿದ್ದ ಅಂಗಡಿ ಮಾಲೀಕರ ಮೇಲೆ ದೂರು ದಾಖಲಿಸುವಂತೆ ನಗರಸಭೆ ಪೌರಾಯುಕ್ತ ವೆಂಕಟೇಶ್ ಹಾಗೂ ತಂಡಕ್ಕೆ ಸೂಚಿಸಿದರು. ದಿನಸಿ ಖರೀದಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಅಲ್ಲಿದ್ದ ಗ್ರಾಹಕರಿಗೆ ಅರಿವು ಮೂಡಿಸಿದರು.

ಬಸವನಬಾವಿ ವೃತ್ತದಲ್ಲಿ ತರಕಾರಿ ಮಾರಾಟಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತ ನಿಗದಿ ಪಡಿಸಿದ ದರದಂತೆಯೇ ಗ್ರಾಹಕರಿಗೆ ತರಕಾರಿಗಳನ್ನು ಮಾರಾಟ ಮಾಡಬೇಕು. ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು. ಮುಖ್ಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರಿಸಲಾಗಿದೆ. ಜೀವನೋಪಾಯಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಮೇ 27 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು