ಶುಕ್ರವಾರ, ನವೆಂಬರ್ 22, 2019
22 °C
ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಬೃಹತ್ ಕೆರೆಯೊಂದನ್ನು ಮಾದರಿಯಾಗಿಸಿ

Published:
Updated:
Prajavani

ರಾಯಚೂರು: ಕೆರೆ ಸಮಗ್ರ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಬೃಹತ್ ಕೆರೆಯೊಂದನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಮಾಡಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿ ಬುಧವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಬೃಹತ್ ಕೆರೆ ಆಯ್ಕೆ ಮಾಡಿಕೊಂಡು ಸಂಪೂರ್ಣವಾಗಿ ಹೂಳು ತೆಗೆದು, ನೀರು ಹರಿಯಲು ಅನುಕೂಲವಾಗುವ ಹೊಸ ದಾರಿಗಳನ್ನು ಮಾಡಬೇಕು. ಕೆರೆಯ ಸುತ್ತ ದಂಡೆ ಬಲಪಡಿಸಿ, ಸಸಿಗಳನ್ನು ನೆಟ್ಟು ಮಾದರಿಯನ್ನಾಗಿಸಬೇಕು. ಮಾದರಿ ಕೆರೆ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಲಭ್ಯವಿದ್ದು, ಸಮಗ್ರ ಕ್ರಿಯಾ ಯೋಜನೆ ತಯಾರಿಸಬೇಕು ಎಂದರು.

ಭಾರತೀಯ ಜೈನ್ ಸಂಘದ ಸಹಭಾಗಿತ್ವದಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ 18 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಅದರಲ್ಲಿ ಎರಡು ಕೆರೆಗಳ ಹೂಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. 11 ಕೆರೆಗಳಲ್ಲಿ ಹೂಳುತೆಗೆಯುವ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶರಣಪ್ಪ ಮಾತನಾಡಿ, ಕಳೆದ ವರ್ಷ ಇಲಾಖೆಯಿಂದ ಹಲವು ಕೆರೆಗಳಲ್ಲಿ ಹೂಳು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಾತನಾಡಿ, ಜಲಸಂವರ್ಧನೆ ಯೋಜನೆಯಡಿ ಕೃಷಿ ಇಲಾಖೆಯಿಂದ ಹೂಳು ತೆಗೆಯಲು ಇಂಧನದ ವೆಚ್ಚ ಪಾವತಿಸಲಾಗುತ್ತಿದೆ. ವಿಳಂಬಕ್ಕೆ ಅವಕಾಶವಾಗದಂತೆ ಬಿಲ್ ಪಾವತಿಗೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆರೆಗಳಿರುವ ಗ್ರಾಮಗಳಲ್ಲಿ ಹೂಳು ತೆಗೆಯುವ ಮುನ್ನ ಜಾಗೃತಿ ಮೂಡಿಸಬೇಕು. ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಸಾಗಿಸಲು ಅನುಕೂಲವಾಗಲಿದೆ. ತಾಲ್ಲೂಕು ಮಟ್ಟದಲ್ಲಿ ಉಪ ಸಮಿತಿ ರಚಿಸಿಕೊಂಡು ಕ್ರಮ ಜರುಗಿಸಬೇಕು. ತಾಲ್ಲೂಕಿನ ಕಟ್ಲೆಟ್ಕೂರು ಹಾಗೂ ಅಪ್ಪರ್ ನಂದ್ಯಾಲ ಕೆರೆಗಳಲ್ಲಿ ಸಸಿಗಳನ್ನು ನೆಟ್ಟು ಸಮಗ್ರ ಅಭಿವೃದ್ಧಿ ಮಾಡಬೇಕು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಭಾರತೀಯ ಜೈನ ಸಂಘದ ಕಮಲಕುಮಾರ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಶರಣಬಸವ ಹಾಗೂ ಇತರರು ಇದ್ದರು.

ಪ್ರತಿಕ್ರಿಯಿಸಿ (+)