ಗುರುವಾರ , ಡಿಸೆಂಬರ್ 5, 2019
20 °C

ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ವಿವಿಧ ಯೋಜನೆ ಅಡಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮಗಳ ಕೃಷಿ ಸಂಬಂಧಿತ ಚಟುವಟಿಕೆಗೆ ಹನಿ ನೀರಾವರಿ ಘಟಕ ವಿತರಣೆ ಕಾರ್ಯಕ್ರಮದಡಿ ಫಲಾನುಭವಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೈನುಗಾರಿಕೆಯಲ್ಲಿ 140, ಹಸು ಎಮ್ಮೆ ಸಾಕಾಣಿಕೆಯಲ್ಲಿ 79, ಕುರಿ ಮತ್ತು ಮೇಕೆ ಸಾಕಾಣಿಕೆಗೆ 36, ಸರಕು ಸಾಗಾಣಿಕೆ ವಾಹನಕ್ಕೆ 10, ಮೊಲ ಸಾಕಾಣಿಕೆ ಘಟಕಕ್ಕಾಗಿ 7, ಹನಿ ನೀರಾವರಿ ಘಟಕಕ್ಕಾಗಿ 100 ಎಕೆರೆಗೆ 29 ಅರ್ಜಿ, ನೆರಳು ಪರದೆಗಾಗಿ 9 ಅರ್ಜಿಗಳು ಬಂದಿದ್ದು, ವಯಸ್ಸಿನ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ, ಅದಕ್ಕಾಗಿ ಬೇಕಾಗುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಮುಖ್ಯ ಕಚೇರಿಯಿಂದ ಅನುಮತಿ ಪಡೆಯಲಾಗಿದೆ ಎಂದು ಜಿಲ್ಲಾ ಬುಡಕಟ್ಟು ಕಲ್ಯಾಣಾಧಿಕಾರಿ ಚಿದಾನಂದ ಅವರು ಸಭೆಗೆ ಮಾಹಿತಿ ನೀಡಿದರು.

ಭಾರತ ಸಂವಿಧಾನ ಅನುಚ್ಛೇಧ 275 (1) ರ ಅಡಿಯಲ್ಲಿ ಎಷ್ಟು ಯೋಜನೆಗಳಿವೆ ಹಾಗೂ ಯೋಜನೆಗಳಿಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ನಿಯಮ ಹಾಗೂ ಷರತ್ತುಗಳನ್ವಯ ಆಯ್ಕೆ ಮಾಡಿ. ಅರ್ಜಿ ಸಲ್ಲಿಸಿದ ಫಲಾನುಭವಿಗಳು ಇತರೆ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದಿರಬಾರದು. ಈ ಬಗ್ಗೆ ಹೈನುಗಾರಿಕೆ, ಹಸು-ಎಮ್ಮೆ ಸಾಕಾಣಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸಂಬಂಧಿಸಿದಂತೆ ಪಶು ಸಂಗೋಪನೆ ಇಲಾಖೆ, ಹನಿ ನೀರಾವರಿ ಹಾಗೂ ನೆರಳು ಪರದೇ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯವರು ನಿರಪೇಕ್ಷಣ ಪ್ರಮಾಣ ಪತ್ರ ನೀಡಬೇಕು. ಮೊಲ ಸಾಕಾಣಿಕೆ ಘಟಕಕ್ಕೆ ಸಂಬಂಧಿಸಿದಂತೆ ಯಾವ ನಿಗಮದ ಕಡೆಯಿಂದ ಪ್ರಮಾಣ ಪತ್ರ ನೀಡುವರು ಎಂದು ಮಾಹಿತಿ ಪಡೆದು ಸಲ್ಲಿಸಿ ಎಂದು ಚಿದಾನಂದ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವಿಧವೆಯರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ಮೊದಲ ಆದ್ಯತೆ ನೀಡಿ, ಈ ಯೋಜನೆಗಳಿಂದ ಅವರು ಕೂಡ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆನಂತರ ವಯಸ್ಸಿನ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಎಂದರು.

ಜಿಲ್ಲಾ ಬುಡಕಟ್ಟು ಕಲ್ಯಾಣ ಇಲಾಖೆ ನಿರ್ದೇಶಕ ಶಂಕರ, ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿರ್ದೇಶಕರಾದ ವೈ.ಏ. ಕಾಳೆ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶರಣಬಸವ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು