ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಮುನ್ನಚ್ಚರಿಕೆಗೆ ಡಿಸಿ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
Last Updated 28 ಜುಲೈ 2020, 13:36 IST
ಅಕ್ಷರ ಗಾತ್ರ

ರಾಯಚೂರು: ಕಳೆದ ಬಾರಿ ಪ್ರವಾಹ ನಿರ್ವಹಿಸಿದ ಅನುಭವವನ್ನು ಆಧರಿಸಿಈ ಬಾರಿಯೂ ಪ್ರವಾಹ ಸಂಭವಿಸಿದ್ದಲ್ಲೀ ಜನ ಹಾಗೂ ಜಾನುವಾರುಗಳನ್ನು ರಕ್ಷಿಸಲು ಈ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವರ್ಷ ಬಂದ ಪ್ರವಾಹದಲ್ಲಿ ಜಿಲ್ಲೆಯ ಮೂರು ಜನರು ಸೇರಿದಂತೆ ಜಾನುವಾರುಗಳು ಮೃತಪಟ್ಟಿದ್ದವು, ಈ ಬಾರಿ ಪ್ರವಾಹ ಉಂಟಾದರೆ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಇಂದಿನಿಂದಲೇ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಹರಿಯುವ ಕೃಷ್ಣ ನದಿಯಿಂದ ರಾಯಚೂರು ತಾಲ್ಕಿಲೂನಲ್ಲಿ 17, ದೇವದುರ್ಗ ತಾಲ್ಲೂಕಿನಲ್ಲಿ 47, ಲಿಂಗಸೂಗೂರು ತಾಲ್ಕಿಲೂನಲ್ಲಿ 13 ಗ್ರಾಮಗಳು ಹಾಗೂ ಅದೇ ರೀತಿ ತುಂಗಭದ್ರ ನದಿಯಿಂದ ರಾಯಚೂರು ತಾಲ್ಲೂಕಿನಲ್ಲಿ 30, ಮಾನ್ವಿ ತಾಲ್ಲೂಕಿನಲ್ಲಿ 11 ಗ್ರಾಮಗಳು ಹಾಗೂ ಸಿಂಧನೂರು ತಾಲೂಕಿನಲ್ಲಿ 13 ಗ್ರಾಮಗಳು ಪ್ರವಾಹಕ್ಕೆ ಒಳಗಾಗುತ್ತವೆ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.

ಈ ಗ್ರಾಮಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಸ್ಥಿತಿ ಏರ್ಪಟ್ಟರೆ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳನ್ನು ಗುರುತು ಮಾಡಿ ಅವುಗಳನ್ನು ಆಶ್ರಯ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಆ ಆಶ್ರಯ ಕೇಂದ್ರದಲ್ಲಿ ಶುದ್ದ ಕುಡಿಯುವ ನೀರು ಲಭಿಸಬೇಕು. ಶೌಚಾಲಯಗಳು ಉತ್ತಮ ಸ್ಥಿತಿಯಲ್ಲಿರಬೇಕು. ಅಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸಿಕೊಡಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆಯಿದ್ದರೆ ಆ ಕೇಂದ್ರದ ವ್ಯಾಪ್ತಿಯಲ್ಲಿಯೇ ಹೊಸದಾಗಿ ಬೋರ್‌ವೆಲ್ ಕೊರೆಯಿಸಬೇಕು. ಶೌಚಾಲಯಗಳ ಸಮಸ್ಯೆಯಿದ್ದರೆ ಅದನ್ನು ದುರಸ್ತಿ ಪಡಿಸಬೇಕು.ಒಟ್ಟಾರೆ ಆ ಕೇಂದ್ರವನ್ನು ಸಹ ಅಭಿವೃದ್ಧಿ ಪಡಿಸಬೇಕು, ಪ್ರವಾಹದಿಂದ ಸುರಕ್ಷಿತವಾಗಿ ಗ್ರಾಮಸ್ಥರನ್ನು ರಕ್ಷಿಸಲು ಪ್ರತಿಯೊಂದು ಗ್ರಾಮದಲ್ಲಿ ಅಧಿಕಾರಿ ನೇತೃತ್ವದ ತಂಡವನ್ನು ರಚಿಸಬೇಕು ಎಂದು ತಿಳಿಸಿದರು.

ಆಶ್ರಯ ತಾಣವಿಲ್ಲದ ಕಡೆ ತಾತ್ಕಾಲಿಕ ಕೇಂದ್ರಗಳನ್ನು ನಿರ್ಮಿಸಿ ಕೊಡಬೇಕು. ಜಿಲ್ಲೆಯ ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ಮೂರು ನಡುಗಡ್ಡೆಗಳನ್ನು ಸ್ಥಳಾಂತರಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದಿಂದ ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಲು ನಿರ್ದೇಶನ ಬಂದಿದ್ದು, ಅದರಂತೆ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಿ ಅವರಿಗೆ ತರಬೇತಿ ನಿಡಬೇಕು. ಈ ಕಾರ್ಯವನ್ನು ಅತೀ ತುರ್ತಾಗಿ ಹಮ್ಮಿಕೊಳ್ಳಬೇಕು ಎಂದು ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ವಿಪತ್ತು ನಿರ್ವಹಣೆಗಾಗಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಸಾಕಷ್ಟು ಅನುದಾನವನ್ನು ಒದಗಿಸಲಾಗಿದೆ. ಅದನ್ನು ಬಳಸಿಕೊಂಡು ಮೂಲಭೂತ ಸೌಕರ್ಯ ಕಲ್ಪಿಸಬೇಕು. ಪ್ರವಾಹ ಸನ್ನಿವೇಶದಲ್ಲಿ ಪ್ರಸ್ತುತ ಜನ-ಜಾನುವಾರುಗಳನ್ನು ಹಾಗೂ ಇತರೆ ಕಾರ್ಯಕ್ಕೆ ಬೋಟ್‌ಗಳ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಕೂಡಲೇ ಅದಕ್ಕೆ ಅನುಮತಿ ನೀಡಲಾಗುವುದು. ಕಳೆದ ಬಾರಿ ಖರೀದಿಸಿದ 500 ಲೈಫ್ ಜಾಕೆಟ್ ಎಲ್ಲಿ ಹೋದವು ಎಂಬ ಬಗ್ಗೆ ಪರಿಶೀಲಿಸ ವರದಿ ನೀಡುಬೇಕು. ಹಗ್ಗ ಹಾಗೂ ರೇನ್ ಕೋಟ್‌ಗಳನ್ನು ಖರೀದಿಸುವಂತೆ ಜಿಲ್ಲಾಧಿಕಾರಿಯವರು ಸಂಬಂಧಿಸಿದವರಿಗೆ ಸೂಚಿಸಿದರು.

ಪ್ರವಾಹ ಸನ್ನಿವೇಶದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಬೇಕು. ಮಾಹಿತಿ ನೀಡಲು ರಚಿಸಲಾದ ವಾಟ್ಸ್‌ಪ್ ಗ್ರೂಪ್‌ಗಳ ಮೇಲೆ ನಿಗಾವಹಿಸಬೇಕು. ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳಲ್ಲಿ ಮೃತಪಟ್ಟ ಸಂಬಂಧಿಕರಿಗೆ 24 ಗಂಟೆಗಳಲ್ಲಿ ₹5 ಲಕ್ಷ ಪರಿಹಾರ ನೀಡಬೇಕು. ಈ ಕಾರ್ಯದಲ್ಲಿ ಸಮಯ ವ್ಯರ್ಥ ಮಾಡಬಾರದು ಎಂದರು.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ವುತ್ತಿರುವ ಹಿನ್ನಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪ್ರತಿನಿತ್ಯ ಸೋಂಕಿತ ಪ್ರಕರಣಗಳ ನೂರರ ಗಡಿದಾಟುತ್ತಿವೆ. ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ತಾಲ್ಲೂಕು ಕೇಂದ್ರಗಳಲ್ಲಿನ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ಮಾತನಾಡಿ, ತಾಲ್ಲೂಕುಗಳಲ್ಲಿ 20 ಕಡೆ ಸಿಸಿ ಕೇಂದ್ರ ಪ್ರಾರಂಭಿಸಲಾಗಿದೆ. 18 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಸರಕಾರದಿಂದ 4 ಸಾವಿರ ಆಂಟಿಜೆನ್ ಕಿಟ್ ಬಂದಿವೆ ಎಂದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಖಾಸಗಿ ಬೋರ್‌ಗಳನ್ನು ಬಾಡಿಗೆ ಪಡೆದು ಅಥವಾ ಟ್ಯಾಂಕರ್‌ಗಳ ಮೂಲಕ ಅದನ್ನು ಪೂರೈಸಬೇಕು. ಟ್ಯಾಂಕರ್ ಮ್ಯಾನೇಜ್‌ಮೇಂಟ್ ಸಿಸ್ಟಮ್ ಮೂಲಕ ಅದರ ಕಡತವನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಗಣಪತಿ ಸಾಕರೆಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ದುರುಗೇಶ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಮಾತನಾಡಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT