ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಪ್ರಸ್ತಾಪ: ಪರಿಹಾರಕ್ಕೆ ಸೂಚನೆ

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್ ಅಧ್ಯಕ್ಷತೆಯಲ್ಲಿ ನಗರಸಭೆ ಪ್ರಗತಿ ಪರಿಶೀಲನೆ
Last Updated 5 ನವೆಂಬರ್ 2019, 15:01 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ನಗರಸಭೆಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಪ್ರತಿನಿತ್ಯವೂ ತ್ಯಾಜ್ಯ ವಿಲೇವಾರಿ ಆಗಬೇಕು. ಪೌರ ಕಾರ್ಮಿಕರಿಗೆ ಮಧ್ಯಾಹ್ನ ಊಟ ಒದಗಿಸುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಇಂದಿರಾ ಕ್ಯಾಂಟಿನ್‌ ನೆರವು ಪಡೆದುಕೊಳ್ಳಬಹುದು ಅಥವಾ ಸ್ವತಂತ್ರವಾಗಿಯೂ ವ್ಯವಸ್ಥೆ ಕಲ್ಪಿಸಿ. ಎರಡು ಅವಧಿ ಬಯೋಮೆಟ್ರಿಕ್‌ ಹಾಜರಿ ಪಡೆದುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದರು.

ನಗರದಲ್ಲಿ ಒಟ್ಟು 206 ವಾಣಿಜ್ಯ ಮಳಿಗೆಗಳನ್ನು ನಗರಸಭೆಯಿಂದ ನಿರ್ಮಿಸಲಾಗಿದ್ದು, 99 ಮಳಿಗೆಗಳಿಂದ ಬಾಡಿಗೆ ಸಂಗ್ರಹವಾಗುತ್ತದೆ. 107 ಮಳಿಗೆಗಳಿಂದ ಬಾಡಿಗೆಯಿಲ್ಲ. ಐಡಿಎಸ್ಎಂಟಿ ಬಡಾವಣೆಯಲ್ಲಿ 76 ಮಳಿಗೆಗಳಿದ್ದು, ಮೂಲ ಸೌಕರ್ಯವಿಲ್ಲದ ಕಾರಣ ಕೆಲವು ಮಳಿಗೆಗಳು ತೆರೆದುಕೊಂಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಳಿಗೆಗಳ ಬಾಡಿಗೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಎದುರು ಸೂಕ್ತ ಉತ್ತರ ಕೊಟ್ಟು, ಕ್ರಮ ಕೈಗೊಳ್ಳಬೇಕು ಎಂದರು.

ನಗರದಲ್ಲಿ ಕುಡಿಯುವ ನೀರು ಕಲುಷಿತ ಬರುತ್ತಿದೆ. ಅನೇಕ ಕಡೆ ಪೈಪ್‌ಲೈನ್‌ ಒಡೆದು ನೀರು ಪೋಲಾಗುತ್ತಿದೆ. ಶೀಘ್ರವೇ ಸರಿಪಡಿಸಿ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಕೇಂದ್ರದಿಂದ ನೀರು ಶುದ್ಧಿಕರಿಸಿ ಬಿಡಬೇಕು. ನಗರಕ್ಕೆ 24 ಗಂಟೆ ಕುಡಿಯುವ ನೀರು‌ ಸರಬರಾಜು ಕಾಮಗಾರಿ ವಿಳಂಬದ ಕುರಿತು ಪ್ರಶ್ನಿಸಿದ ಅವರು, ತ್ವರಿತವಾಗಿ ಕಾಮಗಾರಿ‌ ಪೂರ್ಣಗೊಳಿಸಬೇಕು. ನಗರಸಭೆಗೆ ಸೇರಿದ ಜಾಗದ ವಿವಾದಗಳು ಶೀಘ್ರವೇ ಪರಿಹರಿಸುವಂತೆ ಅಧಿಕಾರಿಗಳಿಗೆತಿಳಿಸಿದರು.

ನಗರದಲ್ಲಿ 15 ಸಾವಿರ ನಲ್ಲಿಗಳಿಂದ ಮಾತ್ರ ಕರ ಸಂಗ್ರಹವಾಗುತ್ತಿದ್ದು, ಇನ್ನುಳಿದವರು ಮನೆಯ ಮಾಲೀಕರು ನಾವಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು. ಶುಲ್ಕ ಸಂಗ್ರಹವಾಗದ ನಲ್ಲಿಗಳ ಸಂಪರ್ಕ ಕಡಿತಗೊಳಿಸಬೇಕು ಎಂದು ಸೂಚಿಸಿದರು.

ಪ್ರಕರಣ ದಾಖಲು: ನಗರದ ರಸ್ತೆಗಳಲ್ಲಿ ಬಿಡಾಡಿ ದನಗಳು ಕಂಡುಬಂದರೆ ಹಿಡಿದುಕೊಳ್ಳಬೇಕು. ಮಾಲೀಕರು ಪತ್ತೆಯಾದರೆ, ಅಂಥವರ ವಿರುದ್ಧ ಪ್ರಕರಣ ದಾಖಲಿಸಬೇಕು. ಶುದ್ಧಿ ಕುಡಿಯುವ ನೀರು ಒದಗಿಸಬೇಕು. ಒಡೆದುಹೋಗಿರುವ ಪೈಪ್‌ಲೈನ್‌ ದುರಸ್ತಿ ಮಾಡಿಸಬೇಕು ಎಂದರು.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ: ನಗರದ ಎನ್‌ಜಿಒ ಬಡಾವಣೆಯಲ್ಲಿ ಮನೆಯ ತಡೆಗೋಡೆ ಮೇಲೆ ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದಾರೆ ಎಂದು ನಾಗರಿಕರೊಬ್ಬರು ಮನವಿ ಸಲ್ಲಿಸಿದರು.

ರಾಯಚೂರು ನಗರದ ವಾರ್ಡ್ ಸಂಖ್ಯೆ 14 ರಲ್ಲಿ ರಾಜ ಕಾಲುವೆ ಒತ್ತುವರಿಗೆ ಪ್ರೋತ್ಸಾಹ ನೀಡುತ್ತಿರುವ ಪ್ರಭಾರಿ ಪೌರಾಯುಕ್ತ ಮಲ್ಲಿಕಾರ್ಜುನ ಗೋಪಿಶೆಟ್ಟಿ ಕೂಡಲೇ ಅಮಾನತು ಮಾಡುವಂತೆ ಕರ್ನಾಟಕ ಭೀಮ ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಸಿತು.

ಐಡಿಎಸ್‌ಎಂಟಿ ಬಡಾವಣೆಯಿಂದ ಮಾವಿನಕೆರೆಗೆ ಚರಂಡಿ ಸಂಪರ್ಕ ಕಲ್ಪಿಸಿದ್ದರಿಂದ ರೋಗಗಳು ಹರಡುತ್ತಿವೆ ಎಂದು ನಾಗರಿಕರು ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿದವರಿಗೆಲ್ಲ ಸ್ವೀಕೃತಿ ನೀಡಲಾಯಿತು.

ಪ್ರಭಾರಿ ಪೌರಾಯುಕ್ತ ಮಲ್ಲಿಕಾರ್ಜುನ ಗೋಪಿಶೆಟ್ಟಿ, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT