ಶುಕ್ರವಾರ, ಮಾರ್ಚ್ 5, 2021
30 °C

ಅಪೌಷ್ಟಿಕಾಂಶ: ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳ ಬೆಳವಣಿಗೆ ಜೊತೆಗೆ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದ್ದು, ಗುಣಮಟ್ಟದ ಪೌಷ್ಟಿಕಾಂಶದ ಆಹಾರ ಪೂರೈಕೆ ಜತೆಗೆ ಮಕ್ಕಳಲ್ಲಿ ಆದ ಬದಲಾವಣೆ ಮತ್ತು ಪೌಷ್ಠಿಕಾಂಶದ ಕೊರತೆ ಇರುವ ಮಕ್ಕಳ ಬಗ್ಗೆ ಸಮೀಕ್ಷೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೌಷ್ಟಿಕಾಂಶದ ಆಹಾರ ಪೂರೈಕೆ ಕುರಿತ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಗನವಾಡಿಗಳತ್ತ ಮಕ್ಕಳನ್ನು ಸೆಳೆಯಲು ಸ್ಮಾರ್ಟ್ ಅಂಗನವಾಡಿ ಮತ್ತು ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಬೇಕು. ಅಂಗನವಾಡಿಗಳಲ್ಲಿರುವ ಮಕ್ಕಳ ಸಂಖ್ಯೆ ಹಾಗೂ ಪ್ರತಿವರ್ಷ 0ರಿಂದ 6 ವರ್ಷದೊಳಗಿನ ಮಕ್ಕಳ ಮಾಹಿತಿ ಸಂಗ್ರಹಿಸಬೇಕು. ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ವೇಳೆ ಮಕ್ಕಳ ಸಂಖ್ಯೆ ಸರ್ವೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಂಗನವಾಡಿಗಳಲ್ಲಿ ಉತ್ತಮ ಪರಿಸರ, ಆಟದ ಮೈದಾನ, ಶೌಚಾಲಯ, ಟ್ಯಾಂಕ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. 4 ರಿಂದ 5 ಆಟಿಕೆ ಪರಿಕರಗಳು, ಅಂಗನವಾಡಿ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಶಿಕ್ಷಕರಿಗೆ ತರಬೇತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿರುವ ಅಂಗನವಾಡಿಗಳಿಗೆ ನಿರಂತರ ನೀರಿನ ಸೌಲಭ್ಯವಿರಬೇಕು. ಎಲ್ಲಾ ಅಂಗನವಾಡಿಗಳ ಸ್ವಂತ ಮತ್ತು ಬಾಡಿಗೆ ಕಟ್ಟಡದ ಬಗ್ಗೆ ಮಾಹಿತಿ ಪಡೆಯಬೇಕು. 1ವರ್ಷದಲ್ಲಿ 250 ಕಟ್ಟಡಗಳನ್ನ ಮಾಡಿದರೆ 5 ವರ್ಷದಲ್ಲಿ ಶೇ 50 ರಷ್ಟು ಅಂಗನಾಡಿಗಳನ್ನು ಸ್ಮಾರ್ಟ್ ಅಂಗನವಾಡಿಗಳಾಗಿ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ಸಿಡಿಪಿಒ ಜವಾಬ್ದಾರಿ ವಹಿಸಿಕೊಂಡು ಉತ್ತಮ ಕೆಲಸ ಮಾಡಬೇಕು. ಸ್ಮಾರ್ಟ್ ಅಂಗನವಾಡಿಗಳು ಎಲ್.ಕೆ.ಜಿ ಗಳಂತೆ ಎಲ್ಲ ರೀತಿಯ ಶಿಕ್ಷಣ ಅವರಿಗೆ ದೊರೆಯಬೇಕು. ಇದರಿಂದ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯ ಮಕ್ಕಳ ರಕ್ಷಣ ಆಯೋಗದ ಸದಸ್ಯೆ ಜಯಶ್ರೀ ಚನ್ನಾಳ, ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಸುರೇಂದ್ರಬಾಬು,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿಎಚ್.ಗೋನಾಳ, ಸಿಡಿಪಿಒ ಸೇರಿದಂತೆ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು