ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು: ಸಮಸ್ಯಾತ್ಮಕ ಗ್ರಾಮ ಗುರುತಿಸಿ

ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಸೂಚನೆ
Last Updated 4 ಏಪ್ರಿಲ್ 2020, 15:53 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ 1,355 ಜನವಸತಿ ಗ್ರಾಮಗಳ ಪೈಕಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ ಗ್ರಾಮಗಳಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಕ್ರೀಯಾ ಯೋಜನೆ ತಯಾರಿಸಿ ಕೂಡಲೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಕಾರ್ಯನಿರ್ವಹಕ ಎಂಜಿನಿಯರ್ ಗಣಪತಿ ಸಾಕ್ರೆ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಪತ್ತು ನಿರ್ವಹಣಾ ಸಮಿತಿಯಲ್ಲಿ ಮಾತನಾಡಿದರು.

ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಕೊರೆಸುವುದು, ಖಾಸಗಿ ಬೋರ್‌ವೆಲ್ ವಶಪಡಿಸಿಕೊಂಡು ಆ ಮೂಲಕ ನೀರು ಪೂರೈಸುವುದು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು, ಬೋರ್‌ವೆಲ್‌ಗಳಿಗೆ ಪೈಪ್‌ಲೈನ್ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಕಾರ್ಯನಿರ್ವಹಕ ಎಂಜಿನಿಯರ್ ಗಣಪತಿ ಸಾಕರೆ, ಜಿಲ್ಲೆಯಲ್ಲಿ 118 ಗ್ರಾಮಗಳಲ್ಲಿ ಸಮಸ್ಯೆ ಬರಬಹುದು ಎಂದು ಪಟ್ಟಿ ಮಾಡಲಾಗಿದೆ. ಆನಂತರವೂ 163 ಗ್ರಾಮಗಳಲ್ಲಿ ಸಮಸ್ಯೆ ಬರಬಹುದು ಎಂದು ಭಾವಿಸಲಾಗಿದೆ. ಜಿಲ್ಲೆಯ ಸಿಂಧನೂರು, ಮಾನ್ವಿ, ರಾಯಚೂರು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಈ ತಾಲೂಕಿನಲ್ಲಿ ₹50 ಲಕ್ಷ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗಾಗಿ ಕಂಟೇಜೆನ್ಸಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

ದೇವದುರ್ಗ ಹಾಗೂ ಲಿಂಗಸೂಗೂರು ತಾಲೂಕುಗಳನ್ನು ಸಮಸ್ಯಾತ್ಮಕ ತಾಲ್ಲೂಕುಗಳೆಂದು ಗುರುತಿಸಿರುವ ಹಿನ್ನಲೆಯಲ್ಲಿ ₹10 ಲಕ್ಷ ಮೊತ್ತದ ಕಂಟೆಜೆನ್ಸಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ. ಕೂಡಲೇ ಕ್ರಿಯಾ ಯೋಜನೆಗಳನ್ನು ಅನುಮೋದನೆಗೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಡುವಂತೆ ಸೂಚಿಸಿದರು.

‘ಎಲ್ಲಾ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳ ಪಟ್ಟಿ ಮಾಡಲಾಗುತ್ತಿದೆ. ಅವು ಅಂತಿಮಗೊಂಡ ನಂತರ ನೀಡಲಾಗುವುದು’ ಎಂದು ಗಣಪತಿ ಸಾಕರೆ ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಏಪ್ರಿಲ್‌ 10 ರನಂತರ ಭತ್ತದ ಬೆಳೆಗೆ ಕಾಲುವೆಗಳ ಮೂಲಕ ನೀರು ಸರಬರಾಜನ್ನು ಬಂದ್ ಮಾಡಲಾಗುವುದು. ಏಪ್ರಿಲ್‌ 11 ರಿಂದ ಕುಡಿಯುವ ನೀರಿಗಾಗಿ ಮಾತ್ರ ನೀರು ಹರಿಸಲಾಗುವುದು. ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳ ಪಟ್ಟಿಯನ್ನು ಕೂಡಲೇ ಅಂತಿಮ ಗೊಳಿಸಬೇಕು. ಅದಕ್ಕಾಗಿ ಕೂಡಲೇ ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ಜಿಲ್ಲೆಯ ಇಬ್ಬರು ಸಹಾಯಕ ಆಯುಕ್ತರು, ಸಂಬಂಧಿಸಿದ ತಹಶೀಲ್ದಾರರು, ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಸೂಚಿಸಿದರು.

ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರಾಮಕೃಷ್ಣ ಅವರು ಸಭೆಗೆ ಸವಿವರವಾಗಿ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ. ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT