ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಭೂಸ್ವಾಧೀನ ಸಿದ್ಧತೆಗೆ ಡಿಸಿ ಸೂಚನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳ ಸಭೆ
Last Updated 26 ಮೇ 2020, 18:03 IST
ಅಕ್ಷರ ಗಾತ್ರ

ರಾಯಚೂರು: ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಕರ್ನೂಲ್‌ ಕಡೆಗೆ ರಾಯಚೂರು ಜಿಲ್ಲೆಯ ಮೂಲಕ ‘ಭಾರತ ಮಾಲಾ ಪರಿಯೋಜನೆ’ಯಡಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಅಗತ್ಯವಾಗುವ ಭೂಸ್ವಾಧೀನ ಕೈಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಕಲಬುರ್ಗಿ ಮತ್ತು ಬಳ್ಳಾರಿ ಕಚೇರಿಗಳ ಯೋಜನಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳ ಸಭೆ ಆಯೋಜಿಸಿ ಮಾತನಾಡಿದರು.

ಯೋಜನೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಹೆದ್ದಾರಿ ಯೋಜನಾಧಿಕಾರಿಗಳಿಂದ ಪಡೆದುಕೊಳ್ಳಬೇಕು. ಭೂ ಸ್ವಾಧೀನಕ್ಕೆ ದರ ನಿಗದಿ ಪಡಿಸುವುದು, ರಸ್ತೆ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ಸಿದ್ದಪಡಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ವಾರದೊಳಗೆ ಪೂರ್ಣ ಸಿದ್ದತೆ ಮಾಡಿಕೊಂಡು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಕಲಬುರ್ಗಿ ಜಿಲ್ಲೆಯ ಆಳಂದ, ಅಫಜಲಪುರ, ಜೇವರ್ಗಿ ಮಾರ್ಗವಾಗಿ ಹಾಗೂ ರಾಯಚೂರು ಜಿಲ್ಲೆಯಲ್ಲಿ 37 ಕಿ.ಮೀ ಹಾದು ಹೋಗುವ ರಸ್ತೆ ನಿರ್ಮಾಣಕ್ಕೆ ಪೂರ್ವಭಾವಿ ಸಿದ್ದತೆ ಕೈಗೊಳ್ಳಬೇಕು. ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿಕೊಳ್ಳಬೇಕು ಎಂದು ಸೂಚಿಸಿದರು.

ಕೃಷಿ ಭೂಮಿ ಸ್ವಾಧೀನಕ್ಕೆ ಬೆಲೆ ನಿಗಧಿ ಪಡಿಸಬೇಕಿದ್ದು, ಸಂಬಂಧಿಸಿ ಇಲಾಖೆಗಳು ಸೂಕ್ತ ಮಾರ್ಗ ಹಾಗೂ ಸ್ವಾಧೀನ ಅವಶ್ಯಕತೆ ಕುರಿತು ಪೂರ್ವಾಭಾವಿ ಮಾಹಿತಿಯನ್ನು ಕ್ರೋಢಿಕರಿಸಬೇಕು. ರಾಯಚೂರು ನಗರಕ್ಕೆ ವರ್ತುಲ್‌ ರಸ್ತೆ ನಿರ್ಮಾಣಕ್ಕಾಗಿ ಯರಮರಸ್, ಚಿಕ್ಕಸೂಗೂರು, ದೇವಸೂಗೂರು ಮೂಲಕ ಮಂತ್ರಾಲಯ ರಸ್ತೆಗೆ ಜೋಡಿಸುವ ಲಿಂಕ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ನಡೆಸಿರುವ ಸಮೀಕ್ಷೆಯ ಪ್ರಕಾರವೇ ಭೂ ಸ್ವಾಧೀನಕ್ಕೆ ಅವಶ್ಯಕತೆ ಇರುವ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು.

ಮಂತ್ರಾಲಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ವಾಹನಗಳ ಸಮೀಕ್ಷೆ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು. ಹೆದ್ದಾರಿ ಕಾಮಗಾರಿಗಳ ಕುರಿತಾಗಿ ಈಗಾಗಲೇ ಸಿದ್ದಪಡಿಸಲಾದ ನೀಲನಕ್ಷೆಯಂತೆ ಹಾದೂ ಹೋಗುವ ಪ್ರತಿ ಗ್ರಾಮದ ಭೂಮಿ, ನಷ್ಟದ ಅಂದಾಜುಗಳ ಮಾಹಿತಿಯನ್ನು ನೀಡಿದಾಗ ಮಾತ್ರ ಭೂ ಸ್ವಾಧೀನ ಬೆಲೆ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ಆರ್‌ಡಿಎ ಪ್ರಭಾರಿ ಆಯುಕ್ತ ಶರಣಪ್ಪ, ಎಇಇ ಪ್ರಕಾಶ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT