ಎಲ್ಲರೂ ಕಡ್ಡಾಯ ಮತದಾನ ಮಾಡಿ: ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ

ಭಾನುವಾರ, ಮೇ 26, 2019
22 °C
ಮತದಾನಕ್ಕೆ ಸಿದ್ಧತೆ ಪೂರ್ಣ

ಎಲ್ಲರೂ ಕಡ್ಡಾಯ ಮತದಾನ ಮಾಡಿ: ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ

Published:
Updated:
Prajavani

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ನಿಷ್ಪಕ್ಷಪಾತದಿಂದ ಯಾವುದೇ ಅಮಿಷಕ್ಕೆ ಒಳಗಾಗದೆ ಮತದಾರರು ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ. ಮನವಿ ಮಾಡಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಏಪ್ರಿಲ್‌ 23 ರಂದು ಮತದಾನ ಕಾರ್ಯ ನಡೆಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಯಾ ವಿಧಾನಸಭೆ ಕ್ಷೇತ್ರದ ತಾಲ್ಲೂಕು ಕೇಂದ್ರಗಳಿಂದ ಇನ್ನುಳಿದ ವಿಧಾನಸಭೆ ಕ್ಷೇತ್ರಗಳಿಗೆ ಮತಗಟ್ಟೆ ಸಿಬ್ಬಂದಿ ಕರೆದುಕೊಂಡು ಹೋಗುವುದಕ್ಕೆ ವಾಹನಗಳ ವ್ಯವಸ್ಥೆಯಾಗಿದೆ ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇವರೆಗೂ 254 ಪ್ರಕರಣಗಳು ದಾಖಲಾಗಿವೆ. ಬಹುತೇಕ ಎಫ್‌ಐಆರ್‌ ಮಾಡಲಾಗಿದೆ. ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರು, ಆರಕ್ಷಕ ವೀಕ್ಷಕರು ಮತ್ತು ಲೆಕ್ಕ ವೀಕ್ಷಕರನ್ನು ನೇಮಿಸಿದೆ.

ಕ್ಷೇತ್ರದಲ್ಲಿ 983 ಕಡೆಗಳಲ್ಲಿ ನೆರಳಿನ ವ್ಯವಸ್ಥೆಗಾಗಿ ಶಾಮಿಯಾನ ಹಾಕಲಾಗುತ್ತಿದ್ದು, ಪ್ರತಿಯೊಂದು ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗಾಗಿ ವ್ಹೀಲ್‌ ಚೇಯರ್‌ ವ್ಯವಸ್ಥೆ ಮತ್ತು ಮತಗಟ್ಟೆಗೆ ಬಿಡುವುದಕ್ಕೆ ವಾಹನ ವ್ಯವಸ್ಥೆಯೂ ಇದೆ. ಅಂಧ ಮತದಾರರಿಗಾಗಿ ಬ್ರೈಲ್‌ ಮತಪತ್ರವನ್ನು ಮುದ್ರಿಸಲಾಗಿದೆ ಎಂದರು.

ರಾಯಚೂರು ನಗರದಲ್ಲಿ ಎಂಟು, ಲಿಂಗಸುಗೂರಿನಲ್ಲಿ ಮೂರು ಹಾಗೂ ಇನ್ನುಳಿದ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಎರಡು ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಯಾದಗಿರಿ, ರಾಯಚೂರು ನಗರ ಹಾಗೂ ಲಿಂಗಸುಗೂರು ಪಟ್ಟಣದಲ್ಲಿ ತಲಾ ಒಂದು ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಮತಗಟ್ಟೆ ವ್ಯವಸ್ಥೆಗಾಗಿ ಪೊಲೀಸರು ಸೇರಿದಂತೆ ಒಟ್ಟು 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಪ್ರತಿ ಮನೆಗೂ ವೋಟರ್‌ ಸ್ಲಿಪ್‌ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಮೊಬೈಲ್‌ ನಿಷೇಧ

ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರನ್ನು ಬಿಟ್ಟು ಇನ್ನುಳಿದವರು ಮೊಬೈಲ್‌ ಹೊಂದುವುದನ್ನು ನಿಷೇಧಿಸಲಾಗಿದೆ. ಮತದಾರರು ಮೊಬೈಲ್‌ ತೆಗೆದುಕೊಂಡು ಬರುವಂತಿಲ್ಲ.

ವೋಟರ್‌ ಸ್ಲೀಪ್‌ನೊಂದಿಗೆ ಇನ್ನೊಂದು ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಬರೀ ವೋಟರ್‌ ಸ್ಲೀಪ್‌ ಆಧರಿಸಿ ಮತದಾನಕ್ಕೆ ಅವಕಾಶ ನೀಡುವುದಿಲ್ಲ. ಆಧಾರ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಸೇರಿದಂತೆ 11 ಬಗೆಯ ಗುರುತಿನ ಚೀಟಿಗಳ ಪೈಕಿ ಒಂದನ್ನು ಕಡ್ಡಾಯವಾಗಿ ಮತದಾರ ತೋರಿಸಬೇಕಾಗುತ್ತದೆ.

23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯುವುದು. 6 ಗಂಟೆಗೆ ಹಾಜರಿರುವ ಎಲ್ಲ ಮತದಾರರನ್ನು ಪರಿಗಣಿಸಿ ಮತದಾನಕ್ಕೆ ಅವಕಾಶ ನೀಡಲಾಗುವುದು. ಮತದಾನ ದಿನದಂದು ಯಾವುದೇ ಸಭೆ, ಸಮಾರಂಭ ಅಥವಾ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯ ಭಾವಚಿತ್ರವನ್ನು ಪ್ರದರ್ಶನ ಮಾಡುವಂತಿಲ್ಲ. ಅಭ್ಯರ್ಥಿಗಳ ಮನೆಮನೆಗೆ ಹೋಗಿ ಪ್ರಚಾರ ಮಾಡುವುದಕ್ಕೆ ನಿರ್ಬಂಧ ಇರುವುದಿಲ್ಲ ಎಂದರು.

ಯಾವುದೇ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪಗಳಲ್ಲಿ ಉಚಿತ ಊಟೋಪಚಾರ ಮಾಡಿಸುವುದನ್ನು ನಿಷೇಧಿಸಲಾಗಿದೆ. ರಾಯಚೂರು ಲೋಕಸಭೆ ಕ್ಷೇತ್ರ ವ್ಯಕ್ತಿಯ ಮತದಾರನಲ್ಲದ ವ್ಯಕ್ತಿಯು 21 ರಿಂದ ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !