ಮಂಗಳವಾರ, ಸೆಪ್ಟೆಂಬರ್ 28, 2021
21 °C
ಜಿಲ್ಲಾಧಿಕಾರಿ ಭೇಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ನಡುಗಡ್ಡೆ ಗ್ರಾಮಸ್ಥರ ಮನವಿ

ಶಾಶ್ವತ ಸ್ಥಳಾಂತರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ಬಿ.ಸಿ.ಸತೀಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶಗಳ ಕುಟುಂಬಗಳ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರದ ನಿರ್ದೇಶನ ಆಧರಿಸಿ ತುರ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ತಿಳಿಸಿದರು.

ಹಂಚಿನಾಳ ಬಳಿಯ ಶೀಲಹಳ್ಳಿ ಸೇತುವೆ, ಯಳಗುಂದಿ ವಿದ್ಯುತ್‍ ಉತ್ಪಾದನಾ ಘಟಕದಿಂದ ನಡುಗಡ್ಡೆಗಳ ವೀಕ್ಷಣೆ ಮಾಡಿ ಮಾತನಾಡಿದ ಅವರು, ‘ಮೂರು ನಡುಗಡ್ಡೆ ಪ್ರದೇಶಗಳ ಜನ ಜಮೀನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿಬೇಕು. ಇಲ್ಲ ಬೇರೆ ಕಡೆಗೆ ಜಮೀನು ಕೊಡಿಸಬೇಕು. ಸುಸಜ್ಜಿತ ಬಡಾವಣೆ ನಿರ್ಮಿಸಿ ಸ್ಥಳಾಂತರ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪರಿಶೀಲನೆ ನಡೆಸಲಾಗುವುದು’ ಎಂದರು.

‘ತಾವು ಕೂಡ ಅಧಿಕಾರ ಸ್ವೀಕರಿಸಿ ಎರಡು ದಿನಗಳಾಗಿವೆ. ಜಿಲ್ಲೆಯ ನಡುಗಡ್ಡೆ ಪ್ರದೇಶಗಳ ಅಧ್ಯಯನ, ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ನಡುಗಡ್ಡೆ ಪ್ರದೇಶಗಳ ಜನರ ಸುರಕ್ಷತೆ ಹಾಗೂ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು (ಎನ್‍ಡಿಆರ್‌ಎಫ್‌) ಸಹ ಕಾಯ್ದಿರಿಸಿದ್ದೇವೆ’ ಎಂದರು.

‘ತಾಲ್ಲೂಕು ಆಡಳಿತ ಈಗಾಗಲೇ ಪಡಿತರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದೆ. ಹೆಚ್ಚುವರಿಯಾಗಿ ಔಷಧಿ ಇತರೆ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ’ ಎಂದು ಸಲಹೆ ನೀಡಿದರು.

ನಡುಗಡ್ಡೆ ಗ್ರಾಮಸ್ಥರ ಮನವಿ: ನಡುಗಡ್ಡೆ ಪ್ರದೇಶಗಳ ಕುಟುಂಬಸ್ಥರನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ಕೃಷ್ಣಾ ನಡುಗಡ್ಡೆ ಗ್ರಾಮಗಳು, ಪ್ರದೇಶಗಳ ಜನತೆಗೆ ಅನುಕೂಲ ಆಗುವಂತೆ ಸರ್ಕಾರಿ ಪ್ರೌಢಶಾಲೆ, ಶೀಲಹಳ್ಳಿ ಸೇತುವೆ ಎತ್ತರಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರ, ನ್ಯಾಯ ಬೆಲೆ ಅಂಗಡಿ ಸೇರಿ ಇತರೆ ಸೌಲಭ್ಯ ಕಲ್ಪಿಸುವಂತೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುದಕಪ್ಪ ಹಂಚಿನಾಳ ನೇತೃತ್ವದಲ್ಲಿ ಜನ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಉಪ ವಿಭಾಗಾಧಿಕಾರಿಗಳಾದ ರಾಹುಲ್‍ ಸಂಕನೂರ ಲಿಂಗಸುಗೂರು, ಸಂತೋಷಕುಮಾರ ಕಾಮಗೌಡ ರಾಯಚೂರು, ತಹಶೀಲ್ದಾರ್ ಚಾಮರಾಜ ಪಾಟೀಲ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರವೀಂದ್ರ ಘಾಟ್ಗೆ, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮಲೆಕ್ಕಾಧಿಕಾರಿ ರಮೇಶ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಹಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.